

ಮುಂಬೈ: ಹಿರಿಯ ನಟ ಜಾಕಿ ಶ್ರಾಫ್ ಅವರಿಗೂ, ಕಿರಿಯ ನಟಿ ದಿಶಾ ಪಠಾಣಿಗೂ ಏನು ಸಂಬಂಧ ಎಂಬ ಪ್ರಶ್ನೆಯನ್ನು ಬಾಲಿವುಡ್ನಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ, ಮಾವ-ಸೊಸೆ ಎಂಬ ಉತ್ತರ ಬರುತ್ತದೆ. ಏಕೆಂದರೆ, ಜಾಕಿ ಶ್ರಾಫ್ ಅವರ ಮಗ ಟೈಗರ್ ಶ್ರಾಫ್ ಅವರನ್ನು ದಿಶಾ ಪಠಾಣಿ ಡೇಟಿಂಗ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ.
ಹೀಗೆ ರಿಯಲ್ ಲೈಫ್ನಲ್ಲಿ ಮಾವ-ಸೊಸೆಯಾಗುತ್ತಿರುವ ಜಾಕಿ ಮತ್ತು ದಿಶಾ, ರಿಯಲ್ ಲೈಫ್ನಲ್ಲಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಹಾಗೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಆ ಚಿತ್ರ ಯಾವುದು ಗೊತ್ತಾ? 'ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್'.
ಸಲ್ಮಾನ್ ಖಾನ್ ಅಭಿನಯದ ಚಿತ್ರ, 'ರಾಧೆ'. ಈ ಚಿತ್ರದಲ್ಲಿ ಜಾಕಿ ಶ್ರಾಫ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ತಂಗಿಯಾಗಿ ದಿಶಾ ಪಠಾಣಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ಗೆ ದಿಶಾ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಈದ್ ಮಿಲಾಸ್ ಸಮಯದಲ್ಲಿ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ವಸಿಷ್ಠ ಸಿಂಹ ಹೆಸರಿನಲ್ಲೊಂದು ಕ್ಯಾಲೆಂಡರ್
ಇನ್ನು, 'ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರವು ಹೊಸ ದಾಖಲೆ ಮಾಡಿದೆ. ಈ ಚಿತ್ರದ ಸ್ಯಾಟಿಲೈಟ್, ಡಿಜಿಟಲ್ ಮತ್ತು ಮ್ಯೂಸಿಕ್ ಹಕ್ಕುಗಳನ್ನು ದಾಖಲೆಯ 230 ಕೋಟಿ ರೂಗಳಿಗೆ ಮಾರಾಟ ಮಾಡಲಾಗಿದೆಯಂತೆ. ಜೀ ಸ್ಟುಡಿಯೋಸ್ ಸಂಸ್ಥೆಯು ಇಷ್ಟೊಂದು ದುಬಾರಿ ಮೊತ್ತ ಕೊಟ್ಟು ಖರೀದಿಸಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.