ಶೋಭಿತಾ ಧೂಳಿಪಾಲ ಸಮಂತಾರ ಸಹೋದರಿ! ಅಚ್ಚರಿ ಮಾಹಿತಿ ಬಯಲು, ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್…​

Sobhita Dhulipala,
Published on

ಹೈದರಾಬಾದ್​: ಟಾಲಿವುಡ್​ ಸ್ಟಾರ್​ ಹೀರೋ ಅಕ್ಕಿನೇನಿ ನಾಗಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಗೆಳತಿ ಹಾಗೂ ನಟಿ ಶೋಭಿತಾ ಧೂಳಿಪಾಲ ಜತೆ ನಾಗಚೈತನ್ಯ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಪ್ರೇಮ ಪಕ್ಷಿಗಳ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಇಷ್ಟು ದಿನ ಕೇವಲ ವದಂತಿಯಾಗಿತ್ತು. ಆದರೆ, ಈಗ ವದಂತಿ ನಿಜವಾಗಿದೆ.

ನಾಗಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕಿನೇನಿ ನಾಗಾರ್ಜುನ ಅವರು ಅಧಿಕೃತವಾಗಿ ನಿನ್ನೆ (ಆ.8) ಘೋಷಣೆ ಮಾಡಿದ್ದಾರೆ. ಚೈತನ್ಯ ಅವರು ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದರೆ, ಶೋಭಿತಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಅತ್ಯಂತ ಸರಳವಾಗಿ ಈ ನಿಶ್ಚಿತಾರ್ಥ ಸಮಾರಂಭ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ನಾಗಚೈತನ್ಯ ಈ ಹಿಂದೆ ನಟಿ ಸಮಂತಾರನ್ನು ಪ್ರೀತಿಸಿ ವಿವಾಹವಾಗಿದ್ದರು. 2017 ರಲ್ಲಿ ಮದುವೆಯಾಗಿ 2021 ರಲ್ಲಿ ಇಬ್ಬರು ಭಿನ್ನಾಭಿಪ್ರಾಯಗಳ ಕಾರಣದಿಂದ ಬೇರ್ಪಟ್ಟರು. ಇದು ಕೂಡ ಭಾರಿ ಸುದ್ದಿಯಾಗಿತ್ತು.

ಇದೀಗ ನಾಗಚೈತನ್ಯ ಅವರ ಭಾವಿ ಪತ್ನಿಯ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. ಶೋಭಿತಾ ಅವರು ಸಮಂತಾ ಅವರ ಸಹೋದರಿ ಎಂಬ ವಿಚಾರ ಬಯಲಾಗಿದೆ. ಇದನ್ನು ತಿಳಿದ ನಟಿ ಸಮಂತಾ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ನಿಜಕ್ಕೂ ಶೋಭಿತಾ, ಸಮಂತಾರ ಸಹೋದರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಸ್ಪಷ್ಟವಾಗಿ ತನಿಖೆ ನಡೆಸಿದ ಬಳಿಕ ಶೋಭಿತಾ ಸಹೋದರಿಯ ಹೆಸರು ಕುಡ ಸಮಂತಾ ಎಂಬುದು ತಿಳಿದು ಬಂದಿದೆ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ವಾಸ್ತವವಾಗಿ ನಟಿ ಸಮಂತಾ ಮತ್ತು ಶೋಭಿತಾ ಇಬ್ಬರೂ ಸಂಬಂಧಿಕರಲ್ಲ.

ಅಂದಹಾಗೆ ಶೋಭಿತಾ ಧೂಳಿಪಾಲ ಅವರು 1992, ಮೇ 31ರಂದು ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದರು. ಆಕೆಯದ್ದು ತೆಲುಗು ಕುಟುಂಬ. ತಾಯಿ ಶಾಂತಾ ಕಾಮಾಕ್ಷಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ತಂದೆ ವೇಣುಗೋಪಾಲ್ ರಾವ್ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್ ಆಗಿದ್ದರು. ಸಮಂತಾ ಧೂಳಿಪಾಲ ಎಂಬುದು ಅವರ ತಂಗಿಯ ಹೆಸರು.

Shobita

ಅಂದಹಾಗೆ ಸುದೀರ್ಘ ಡೇಟಿಂಗ್​ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್​ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾದರು.

ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ನಟಿ ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದೀಗ ತಮ್ಮ ಸಂಬಂಧಕ್ಕೆ ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net