

ಮುಂಬೈ: ಕ್ಯಾನ್ಸರ್ನಿಂದ ನಿಧನರಾದ ಬಾಲಿವುಡ್ ಹಿರಿಯ ನಟ ಇರ್ಫಾನ್ ಖಾನ್ ಅವರ ಅಂತ್ಯಕ್ರಿಯೆ ಕರೊನಾ ಲಾಕ್ಡೌನ್ ನಡುವೆಯು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಬುಧವಾರ ನೆರವೇರಿತು.
ಮಧ್ಯಾಹ್ನ 3 ಗಂಟೆಗೆ ಮುಂಬೈನ ವರ್ಸೊವಾ ಕಬ್ರಸ್ತಾನ್ನಲ್ಲಿ ಅಂತ್ಯಕ್ರಿಯೆ ನೇರವೇರಿತು. ಲಾಕ್ಡೌನ್ ಕಾರಣದಿಂದಾಗಿ ಪತ್ನಿ ಸುತಪಾ ಸಿಕ್ದಾರ್, ಮಕ್ಕಳಾದ ಅಯಾನ್ ಮತ್ತು ಬಬಿಲ್ ಸೇರಿ ಕುಟುಂಬವರ್ಗ ಮತ್ತು ಕೆಲವೇ ಮಂದಿ ಆಪ್ತರ ಸಮ್ಮುಖದಲ್ಲಿ ಅಂತಿಮ ಕಾರ್ಯ ನಡೆಯಿತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಎಲ್ಲರೂ ಇರ್ಫಾನ್ ಅವರ ಅಗಲಿಕೆಗೆ ಕಂಬನಿ ಮಿಡಿದರು.
ಇದಕ್ಕೂ ಮುನ್ನ ಸಿನಿ ಜಗತ್ತಿನ ಅದ್ಭುತ ಪ್ರತಿಭೆ ಇನ್ನಿಲ್ಲ ಎಂಬ ಸುದ್ದಿ ಕೇಳಿದ ಸಿನಿ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದರು. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಹ ಕಂಬನಿ ಮಿಡಿದಿದ್ದಾರೆ.
ಎರಡು ವರ್ಷಗಳ ಹಿಂದೆ ನ್ಯೂರೋಎಂಡೋಕ್ರೈನ್ ಟ್ಯೂಮರ್ ಚಿಕಿತ್ಸೆಗೆ ಒಳಗಾದಾಗಿನಿಂದ ಇರ್ಫಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ಕರುಳಿನ ಸೋಂಕಿನಿಂದ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ವಿಧಿವಶರಾದರು. ಇತ್ತೀಚೆಗಷ್ಟೇ ಅವರ ತಾಯಿ ಶಹೀದಾ ಬೇಗಂ ಸಹ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸುವುದಕ್ಕೆ ಇರ್ಫಾನ್ಗೆ ಸಾಧ್ಯವಾಗಿರಲಿಲ್ಲ.
ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಇರ್ಫಾನ್ ನಟನೆಯ ಅಂಗ್ರೇಜಿ ಮೀಡಿಯಂ ಚಿತ್ರ ಲಾಕ್ಡೌನ್ ಕಾರಣದಿಂದ ಹೆಚ್ಚು ಜನರನ್ನು ರಂಜಿಸಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ ಎರಡೇ ದಿನದಲ್ಲಿ ಕರೊನಾ ಲಾಕ್ಡೌನ್ ಘೋಷಣೆಯಾಯಿತು. ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಅಂಗ್ರೇಜಿ ಮೀಡಿಯಂ ಚಿತ್ರ ಡಿಸ್ನಿ ಹಾಟ್ಸ್ಟಾರ್ನಲ್ಲಿ ಲಭ್ಯವಿದೆ. (ಏಜೆನ್ಸೀಸ್)