ಇರ್ಫಾನ್ ಖಾನ್ ಇನ್ನಿಲ್ಲ ... ಅದ್ಭುತ ಪ್ರತಿಭೆಯೊಂದನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ

Irfan Khan Final
Published on

ಕಳೆದ ಕೆಲವು ವರ್ಷಗಳಿಂದ ಟ್ಯೂಮರ್‌ನಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ (54), ಬುಧವಾರ ನಿಧನರಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಇರ್ಫಾನ್, ಅದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾರಣಕ್ಕೆ ಅವರು ಅಭಿನಯಿಸುವುದನ್ನೂ ಬಿಟ್ಟಿದ್ದರು. ಭಾರತಕ್ಕೆ ವಾಪಸ್ಸಾದರೂ, ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ‘ಅಂಗ್ರೇಜಿ ಮೀಡಿಯಮ್’ ನಟಿಸಿದ್ದ ಇರ್ಫಾನ್ ಖಾನ್, ಆ ಚಿತ್ರದ ಪ್ರಮೋಷನ್‌ಗೂ ಹೋಗಿರಲಿಲ್ಲ. ಕಳೆದ ತಿಂಗಳಷ್ಟೇ ಆ ಚಿತ್ರ ಬಿಡುಗಡೆಯಾಗಿತ್ತು.

ಈ ಮಧ್ಯೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದ ಇರ್ಫಾನ್, ಮುಂಬೈನ ಕೋಕಿಲಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರ ತಾಯಿ ಶಹೀದಾ ಬೇಗಂ ಸಹ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸುವುದಕ್ಕೆ ಇರ್ಫಾನ್​ಗೆ ಸಾಧ್ಯವಾಗಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್​, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net