

ಬೆಂಗಳೂರು: ಕಾಮಿಡಿ ನಟ ಧರ್ಮಣ್ಣ ಕಡೂರು ಸೇರಿ ಒಂದು ತಿಂಗಳಾಗಿದೆ. ಹಬ್ಬಕ್ಕೆ ಅವರು, ‘ರಾಮ ರಾಮಾ ರೇ’ ನಿರ್ದೇಶಕ ಸತ್ಯಪ್ರಕಾಶ್ ಇಬ್ಬರೂ ಊರಿಗೆ ಹೋಗಿದ್ದಾರೆ. ಹೋಗಿ ಎರಡೇ ದಿನಕ್ಕೆ ಲಾಕ್ಡೌನ್ ಘೋಷಣೆಯಾಗಿದೆ. ಈಗ ಸದ್ಯ ಊರಿನಲ್ಲೇ ಇರುವ ಅವರು, ಸದ್ದಿಲ್ಲದೆ ಮೂರೂವರೆ ನಿಮಿಷದ ಒಂದು ಕಿರುಚಿತ್ರ ಮಾಡಿದ್ದಾರೆ.
ಹೌದು, ಸತ್ಯ ಮತ್ತು ಧರ್ಮಣ್ಣ ಇಬ್ಬರೂ ಸತ್ಯವನ್ನೇ ಹೇಳುತ್ತೇನೆ ಎಂಬ ಹೆಸರಿನಲ್ಲಿ ಒಂದು ಕಿರುಚಿತ್ರ ಮಾಡಿ, ಅದನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಸತ್ಯ ವಹಿಸಿಕೊಂಡರೆ, ಧರ್ಮಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಾಹಸದಲ್ಲಿ ವಾಸುಕಿ ವೈಭವ್ ಸಹ ಕೈಜೋಡಿಸಿದ್ದು, ಅವರು ಸಂಗೀತ ಸಂಯೋಜಿಸಿದ್ದಾರೆ. ಇನ್ನು ಹಿರಿಯ ಸಂಕಲನಕಾರ ಬಿ.ಎಸ್. ಕೆಂಪರಾಜು, ಈ ಕಿರುಚಿತ್ರವನ್ನು ಎಡಿಟ್ ಮಾಡಿದ್ದಾರೆ. ಇಷ್ಟಕ್ಕೂ ಈ ಕಿರುಚಿತ್ರದ ವಿಶೇಷತೆ ಏನು ಎಂದರೆ, ‘ಮನುಷ್ಯರಿಗೆ ಕೆಮ್ಮು ಬರುವುದು ಸಾಮಾನ್ಯ. ಅದೇ ವಸ್ತುಗಳಿಗೆ ಕೆಮ್ಮು ಬಂದರೆ ಎಲ್ಲಿಗೆ ಹೋಗೋದು? ಅದು ಹೇಗೆ ಸಾಧ್ಯ ಅಂತೀರಾ. ಎಲ್ಲೆಲ್ಲೂ ಕರೊನಾ ಬಗ್ಗೆ ಕೇಳಿಕೇಳಿ ಸುಸ್ತಾಗುವ ಮನುಷ್ಯನೊಬ್ಬನಿಗೆ ನಿರ್ಜೀವ ವಸ್ತುಗಳು ಸಹ ಕೆಮ್ಮುವಂತೆ ಕೇಳಿಸುತ್ತದೆ.
ಆ ನಂತರ ಅವನ ಮನಸ್ಥಿತಿ ಹೇಗಿರುತ್ತದೆ ಮತ್ತು ಅವನು ಏನೆಲ್ಲಾ ಮಾಡುತ್ತಾನೆ’ ಎನ್ನುವುದನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಧರ್ಮಣ್ಣ. ಇದು ಒಂದೇ ವಿಷಯಕ್ಕೆ ಮುಗಿಯುವುದಿಲ್ಲ, ಮುಂದಿನ ದಿನಗಳಲ್ಲಿ ‘ಸತ್ಯವನ್ನೇ ಹೇಳುತ್ತೇನೆ’ ಸೀರೀಸ್ನಲ್ಲಿ ಇನ್ನಷ್ಟು ಕಿರುಚಿತ್ರಗಳನ್ನು ಮಾಡುವ ಯೋಚನೆ ಇದೆ ಎನ್ನುತ್ತಾರೆ ಧರ್ಮಣ್ಣ. ಈಗ ಮೊದಲ ಕಿರುಚಿತ್ರ ಬಿಡಗುಡೆಯಾಗಿದ್ದು, ಮುಂದಿನ ದಿನಗಳಲ್ಲಿ ‘ಸತ್ಯವನ್ನೇ ಹೇಳುತ್ತೇನೆ’ ಹೆಸರಿನಲ್ಲಿ ಇನ್ನಷ್ಟು ಬಿಡುಗಡೆಯಾಗುವ ಸಾಧ್ಯತೆ ಇದೆ.