ಶ್ರೀನಿ ನಿರ್ದೇಶನದ ಓಲ್ಡ್​ ಮಾಂಕ್​ಗೆ ಅಮೆರಿಕ ಅಧ್ಯಕ್ಷರ ಪ್ರಚಾರ

Old Monk
Published on

ಬೆಂಗಳೂರು: ಆರ್​ಜೆ ಶ್ರೀನಿ, ಅದಿತಿ ಪ್ರಭುದೇವ ಅಭಿನಯದ ‘ಓಲ್ಡ್ ಮಾಂಕ್’ ಚಿತ್ರದ ಟೀಸರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್, ಹಿರಿಯ ನಟ ರಾಜೇಶ್ ಮುಂತಾದವರು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿರುವ ಈ ಟೀಸರ್, ಎರಡು ಭಾಷೆಗಳಿಂದ ಸೇರಿ ಯೂಟ್ಯೂಬ್​ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನು, ಚಿತ್ರದ ಟೀಸರ್ ನೋಡಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಫೇಸ್​ಬುಕ್ ಸಿಇಓ ಮಾರ್ಕ್ ಜುಕರ್​ಬರ್ಗ್, ಟೆಸ್ಲಾ ಮೋಟರ್ಸ್​ನ ಸಿಇಓ ಎಲನ್ ಮಸ್ಕ್ ಮುಂತಾದವರು ಟೀಸರ್ ನೋಡಿ ಎಂದು ಪ್ರಚಾರ ಮಾಡುವುದರ ಜತೆಗೆ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಈ ಗಣ್ಯವ್ಯಕ್ತಿಗಳಿಗೂ, ಚಿತ್ರತಂಡಕ್ಕೂ ಎಲ್ಲಿಯ ಸ್ನೇಹ-ಸಂಬಂಧ ಎಂಬ ಪ್ರಶ್ನೆ ಸಹಜ. ಚಿತ್ರದ ಟೀಸರ್​ನ್ನು ವಿಭಿನ್ನವಾಗಿ ಮತ್ತು ಮಜವಾಗಿ ರೂಪಿಸಿರುವ ನಟ-ನಿರ್ದೇಶಕ ಶ್ರೀನಿ, ಈ ಬಾರಿಯೂ ಅದನ್ನು ಮುಂದುವರೆಸಿದ್ದಾರೆ. ಈ ಮೂವರು ಗಣ್ಯವ್ಯಕ್ತಿಗಳು ಮಾತನಾಡುವ ಹಳೆಯ ಸಂದರ್ಶನದ ತುಣುಕುಗಳನ್ನು ತೆಗೆದುಕೊಂಡು, ಅದಕ್ಕೆ ಹಿನ್ನೆಲೆ ಧ್ವನಿ ಮಿಕ್ಸ್ ಮಾಡಿ, ಅವರೇ ‘ಓಲ್ಡ್ ಮಾಂಕ್’ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ. ಟೀಸರ್ ಜತೆಗೆ, ಈ ವಿಡಿಯೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net