

ಬೆಂಗಳೂರು: ಬಾಲಿವುಡ್ ನಟಿ ಊರ್ವಶಿ ರೌಟೆಲಾ, 2015ರಲ್ಲಿ ‘ಮಿ. ಐರಾವತ’ ಚಿತ್ರದ ನಂತರ ಮತ್ತೆ ಕನ್ನಡದಲ್ಲಿ ನಟಿಸಿರಲಿಲ್ಲ. ಬಾಲಿವುಡ್ನಲ್ಲೇ ಬಿಜಿಯಾಗಿದ್ದ ಸುಂದರಿ ಇತ್ತೀಚೆಗಷ್ಟೇ ಕಾಲಿವುಡ್ನ ಸರವಣನ್ ನಾಯಕನಾಗಿರುವ ಪ್ಯಾನ್ ಇಂಡಿಯಾ ಚಿತ್ರ ‘ದಿ ಲೆಜೆಂಡ್’ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಆಗ ಕನ್ನಡದಲ್ಲಿ ಮತ್ತೆ ನಟಿಸುವ ಆಸೆ ವ್ಯಕ್ತಪಡಿಸಿದರು.
‘‘ಮಿ. ಐರಾವತ’ ಚಿತ್ರದ ಬಳಿಕ ಮತ್ತೆ ಕನ್ನಡದಲ್ಲಿ ನಟಿಸುತ್ತಿರುವುದು ಖುಷಿ ನೀಡಿದೆ. ಬಾಲಿವುಡ್ನಲ್ಲೇ ಬಿಜಿಯಾದ ಕಾರಣ ಕನ್ನಡದಲ್ಲಿ ಮತ್ತೆ ನಟಿಸಲು ಸಾಧ್ಯವಾಗಲಿಲ್ಲ. ಆದರೆ ನಟಿಸುವ ಆಸೆಯಂತೂ ಇದೆ’ ಎಂದರು ಊರ್ವಶಿ. ಹಾಗಾದರೆ ಯಾರ ಜತೆ ನಟಿಸಲು ಇಷ್ಟಪಡುತ್ತೀರಿ? ಎಂದು ಕೇಳಿದರೆ, ‘ಕನ್ನಡದಲ್ಲಿ ಕೆಲವು ಆಫರ್ಗಳಿವೆ. ಯಾವುದೂ ಅಂತಿಮವಾಗಿಲ್ಲ, ಹೀಗಾಗಿ ಈಗಲೇ ಹೇಳಲಾಗುವುದಿಲ್ಲ. ‘ಕೆಜಿಎಫ್’ ಯಶ್ ಮತ್ತು ಉಪೇಂದ್ರ ಅವರ ಜತೆ ನಟಿಸಲು ಇಷ್ಟಪಡುತ್ತೇನೆ’ ಎಂದು ನಗುತ್ತಾರೆ ಊರ್ವಶಿ. ಇನ್ನು ‘ದಿ ಲೆಜೆಂಡ್’ ಚಿತ್ರದಲ್ಲಿ ಅವರು ಐಐಟಿ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದು, ಆಕ್ಷನ್ ಕೂಡ ಮಾಡಿದ್ದಾರಂತೆ.
ಹಾಗೆಯೇ ಉತ್ತರ ಭಾರತದವರಾಗಿದ್ದರೂ ಊರ್ವಶಿ ಹೆಚ್ಚಾಗಿ ದಕ್ಷಿಣ ಭಾರತದವರ ಜತೆ ಕನೆಕ್ಟ್ ಆಗುತ್ತಾರಂತೆ. ಅದಕ್ಕೆ, ‘ನನ್ನ ಹೆಸರೂ ದಕ್ಷಿಣ ಭಾರತೀಯರ ಹೆಸರಿನಂತಿದೆ. ನನಗೆ ದಕ್ಷಿಣ ಭಾರತ ಊಟ, ತಿಂಡಿ ಇಷ್ಟ. ದಕ್ಷಿಣ ಭಾರತದ ಚಿತ್ರರಂಗದ ಮೇಲಿನ ಗೌರವ ಹೆಚ್ಚಿದೆ. ಇಲ್ಲಿ ಮಾಡುವ ಚಿತ್ರಗಳ ಗುಣಮಟ್ಟ, ಅದ್ಧೂರಿತನ, ಬಜೆಟ್ ಎಲ್ಲವೂ ಜೋರಾಗಿರುತ್ತದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಒಂದೊಂದು ಚಿತ್ರ ನಟಿಸುವ ಆಸೆಯಿದೆ’ ಎನ್ನುತ್ತಾರೆ ಊರ್ವಶಿ.