

ಬೆಂಗಳೂರು: ‘ಸೈಕೋ’, ‘ಟಗರು’, ‘ಬಳೇಪೇಟೆ’ ಚಿತ್ರಗಳ ಅನಿತಾ ಭಟ್ ಅವರ ಸಿನಿಮಾ ನಿರ್ವಣದ ಆಸೆ ‘ಇಂದಿರಾ’ ಮೂಲಕ ನೆರವೇರಿದ್ದು ಗೊತ್ತಿರಬಹುದು. ಹೊಸ ವಿಷಯ ಏನೆಂದರೆ, ಆ ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಆದರೆ, ಥಿಯೇಟರ್ನಲ್ಲಿ ಅಲ್ಲ, ಬದಲಿಗೆ ಓಟಿಟಿಯಲ್ಲಿ. ಹೌದು, ಚಿತ್ರವು ಸದ್ಯದಲ್ಲೇ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡುವ ಅನಿತಾ, ‘ನಾವು ಸಿನಿಮಾ ಪ್ರಾರಂಭಿಸಿದ್ದು ಕರೋನಾ ಲಾಕ್ಡೌನ್ ಸಮಯದಲ್ಲಿ. ಆಗ ಓಟಿಟಿ ತುಂಬಾ ಟ್ರೆಂಡಿಂಗ್ನಲ್ಲಿತ್ತು. ಹೀಗಾಗಿಯೇ ಓಟಿಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಚಿತ್ರ ಪ್ರಾರಂಭಿಸಿದೆವು. ಈಗ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.
‘ಇಂದಿರಾ’ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದು, ‘ಬಳೇಪೇಟೆ’ ನಿರ್ದೇಶಕ ರಿಷಿಕೇಶ್ ಆಕ್ಷನ್ ಕಟ್ ಹೇಳಿದ್ದಾರೆ. ’ನಿರ್ದೇಶನ ಮಾತ್ರವಲ್ಲ ಛಾಯಾಗ್ರಹಣ, ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಾವೇ ಹಲವು ಜವಾಬ್ದಾರಿಗಳನ್ನು ಹೊತ್ತಿರುವ ಅವರು ಆಲ್ ಇನ್ ಒನ್’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅನಿತಾ ಭಟ್.
ಚಿತ್ರದಲ್ಲಿ ಪತಿಯನ್ನು ಕಳೆದುಕೊಂಡು ಹಳೆಯದನ್ನೆಲ್ಲಾ ಮರೆತ ವಿಶೇಷಚೇತನಳ ಪಾತ್ರದಲ್ಲಿ ಅನಿತಾ ನಟಿಸಿದ್ದಾರೆ. ‘ಆಕೆಯ ಸುತ್ತ ಕಥೆ ಸುತ್ತುತ್ತದೆ. ಆಕೆಗೆ ಸಹಾಯ ಮಾಡಲು ಬರುವ ಪಾತ್ರಗಳಲ್ಲಿ ಯಾರು ಸುಳ್ಳು, ಯಾರು ಸತ್ಯ ಎಂಬುದೇ ಗೊಂದಲ. ವಿಭಿನ್ನ ಕಥೆ. ಪಾತ್ರ ಮಾಡುವಾಗ ತುಂಬ ಕಷ್ಟವಿತ್ತು. ತುಂಬ ಎಚ್ಚರಿಕೆಯಿಂದ ಮಾಡಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಅನಿತಾ ಭಟ್.
ಒಂದು ಅಪಾರ್ಟ್ವೆುಂಟ್ನಲ್ಲಿ ನಡೆಯುವ ಕಥೆಯಾಗಿದ್ದು, ಮೂರು ಕಡೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಮಡಿಕೇರಿ ಹಾಗೂ ಬೆಂಗಳೂರು ಸುತ್ತಮುತ್ತ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಅನಿತಾ ಜತೆಗೆ ನೀತು ಶೆಟ್ಟಿ, ಶಫಿ, ಚಕ್ರವರ್ತಿ ಚಂದ್ರಚೂಡ್, ರೆಹ್ಮಾನ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಂಕಿತಾ ಗೌಡ, ಅಭಿಷೇಕ್ ಮಠದ್, ಜಯದೇವ್, ಶಶಿಕಾಂತ್ ಗಟ್ಟಿ, ಕಾರ್ತಿಕ್ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಲೋಹಿತ್ ನಾಯಕ್ ಸಂಗೀತವಿದೆ.
‘ಇವರಾರೂ ಇಲ್ಲದಿದ್ದರೆ ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿಯೇ ಎಲ್ಲರೂ ನಿರ್ವಪಕರೇ. ಬಾಲ್ಯದ ಗೆಳೆಯ ಪ್ರಜ್ಞಾನಂದ್ ಸೊರಬ್ ಕೂಡ ನಿರ್ವಣದಲ್ಲಿ ಜೊತೆಯಾಗಿದ್ದು ಚಿತ್ರಕ್ಕೆ ಹೊಸ ಶಕ್ತಿ ನೀಡಿತು’ ಎಂದು ಹೇಳಿಕೊಳ್ಳುತ್ತಾರೆ ಅನಿತಾ ಭಟ್. ಕಳೆದ ಅಕ್ಟೋಬರ್ 7ರಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭಹಾರೈಸಿದ ನಟ ಪುನೀತ್ ರಾಜ್ಕುಮಾರ್ ಅವರನ್ನೂ ಅನಿತಾ ಭಟ್ ನೆನಪಿಸಿಕೊಳ್ಳುತ್ತಾರೆ.