'ಪಠಾಣ್​' ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​

Pathaan - Kangana
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಬಿಡುಗಡೆಯಾದಾಗಿನಿಂದ ಕಂಗನಾ ರಣಾವತ್​ ಒಂದಲ್ಲ ಒಂದು ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಕಳೆದೊಂದು ವಾರದಿಂದ ಟ್ವಿಟರ್​ನಲ್ಲಿ ಸಖತ್​ ಆಕ್ಟಿವ್​ ಆಗಿರುವ ಅವರು 'ಪಠಾಣ್​' ಗೆಲ್ಲಿಸಿದ ಜನರನ್ನು ಕಾಲೆಳೆಯುತ್ತಲೇ ಇದ್ದಾರೆ. ಈಗ ಕಂಗನಾ, ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ.

'ಪಠಾಣ್​' ಗೆಲುವಿನ ಕುರಿತು ನೆಟ್ಟಿಗರೊಬ್ಬರು ಟ್ವಟಿರ್​ನಲ್ಲಿ ಬರೆದುಕೊಕಂಡಿದ್ದಾರೆ. ''ಪಠಾಣ್​' ಚಿತ್ರದ ಗೆಲುವು ನಮಗೆ ನಾಲ್ಕು ಪಾಠಗಳನ್ನು ಕಲಿಸುತ್ತದೆ. ಮೊದಲನೆಯದಾಗಿ, ಹಿಂದು ಮತ್ತು ಮುಸ್ಲಿಮರು ಶಾರುಖ್​ ಖಾನ್​ ಅವರನ್ನು ಸಪನಾಗಿ ಇಷ್ಟಪಡುತ್ತಾರೆ. ಚಿತ್ರ ನೋಡಬೇಕಂತಿದ್ದರೆ, ಬಾಯ್ಕಾಟ್​ ಅಭಿಯಾನಗಳು ಅಥವಾ ವಿವಾದಗಳು ಒಂದು ಸಮಸ್ಯೆಯೇ ಅಲ್ಲ. ಮೂರನೆಯದಾಗಿ, ಶೃಂಗಾರ ಮತ್ತು ಒಳ್ಳೆಯ ಸಂಗೀತ ಯಾವತ್ತೂ ವರ್ಕ್​ ಆಗುತ್ತದೆ. ನಾಲ್ಕನೆಯದಾಗಿ ಭಾರತ ಒಂದು ಸೂಪರ್​ ಸೆಕ್ಯುಲರ್​ ದೇಶ' ಎಂದು ಅವರು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, 'ಇದೊಂದು ಅದ್ಭುತ ವಿಶ್ಲೇಷಣೆ. ಈ ದೇಶ ಯಾವತ್ತೂ ಬರೀ ಖಾನ್​ಗಳನ್ನು ಪ್ರೀತಿಸಿದೆ. ಅಷ್ಟೇ ಅಲ್ಲ, ಮುಸ್ಲಿಂ ನಟಿಯರನ್ನು ಕಂಡರೆ ನಮ್ಮ ಜನರಿಗೆ ಅದೇನೋ ಗೀಳು. ಹಾಗಾಗಿ, ಭಾರತದಲ್ಲಿ ದ್ವೇಷ ಮತ್ತು ಫ್ಯಾಸಿಸಂ ಹೆಚ್ಚು ಎಂದು ಬೊಬ್ಬೆ ಹೊಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇಡೀ ಜಗತ್ತಿನಲ್ಲಿ ಭಾರತದಂತಹ ದೇಶ ಇನ್ನೊಂದಿಲ್ಲ' ಎಂದು ಹೇಳಿಕೊಂಡಿದ್ದಾರೆ.

'ಪಠಾಣ್​' ಚಿತ್ರವು ಕಳೆದ ಬುಧವಾರ ಬಿಡಗಡೆಯಾಗಿದ್ದು, ಕಳೆದ ಐದು ದಿನಗಳಲ್ಲಿ ಜಗತ್ತಿನಾದ್ಯಂತ 500 ಕೋಟಿ ರೂ. ಕಲೆಕ್ಷನ್​ ಆಗಿದೆ. ಯಶಸ್ಸಿಗಾಗಿ ಹಾತೊರೆಯುತ್ತಿದ್ದ ಬಾಲಿವುಡ್​ಗೆ ಈ ಯಶಸ್ಸಿನಿಂದ ದೊಡ್ಡ ಆಕ್ಸಿಜನ್​ ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net