

ಬೆಂಗಳೂರು: ಕರೊನಾ ಕಷ್ಟಕಾಲದಲ್ಲಿ ಹಸಿದ ಜನರಿಗೆ ಸಿನಿಮಂದಿಯೂ ಮುಂದೆ ಬಂದು ತುತ್ತು ನೀಡುತ್ತಿದ್ದಾರೆ. ಈಗಾಗಲೇ ಹಲವರು ತಮ್ಮದೇ ರೀತಿಯಲ್ಲಿ ಸಹಾಯಕ್ಕೆ ನಿಂತಿದ್ದಾರೆ. ಈಗ ಆ ಸಾಲಿಗೆ ಇನ್ನಷ್ಟು ಜನ ಸೇರಿದ್ದಾರೆ.
ಊಟದ ವ್ಯವಸ್ಥೆ ಮಾಡಿದ ಚಿಕ್ಕಣ್ಣ: ಇದೀಗ ಹಾಸ್ಯ ನಟ ಚಿಕ್ಕಣ್ಣ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ತಂಗಿರುವ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇದರ ಜತೆಗೆ ಕೆ.ಆರ್. ಆಸ್ಪತ್ರೆ ಮತ್ತು ಬಸ್ ನಿಲ್ದಾಣದ ಬಳಿಯಲ್ಲಿನ 200ಕ್ಕೂ ಅಧಿಕ ನಿರಾಶ್ರಿತರಿಗೆ ಊಟದ ಪ್ಯಾಕೆಟ್ಗಳನ್ನು ನೀಡಿದ್ದಾರೆ.
ಅರಸಿಕೆರೆಯ ಆಸ್ಪತ್ರೆಗೆ ಭೇಟಿ ಕೊಟ್ಟ ಡಾಲಿ: ‘ಡಾಲಿ’ ಧನಂಜಯ್ ಹುಟ್ಟೂರು ಅರಸಿಕೆರೆಯ ಜಯಚಾಮರಾಜೇಂದ್ರ ಆಸ್ಪತ್ರೆಯ ಸ್ಥಿತಿಗತಿಯನ್ನು ಪರಿಶೀಲಿಸಲು ಸ್ಥಳೀಯ ಶಾಸಕ ಶಿವಲಿಂಗೇಗೌಡ ಅವರೊಂದಿಗೆ ತೆರಳಿ ಒಂದು ಸುತ್ತು ಹಾಕಿ ಬಂದಿದ್ದಾರೆ. ಅಷ್ಟೇ ಅಲ್ಲ ರೋಗಿಗಳಿಗೆ ಮತ್ತವರ ಸಂಬಂಧಿಕರಿಗೆ ಧೈರ್ಯ ತುಂಬಿದ್ದಾರೆ. ರೈತರಿಗೆ ಉಪೇಂದ್ರ ಸಾಥ್: ‘ಕರೊನಾ ಲಾಕ್ಡೌನ್ ಪರಿಣಾಮ ರೈತರು ಬೆಳೆದ ಬೆಳೆ ಮಾರಾಟ ಆಗದೆ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ಬಂದ ಹಣದಲ್ಲಿ ರೈತರ ಬಳಿ ನೇರವಾಗಿ ತರಕಾರಿ ಖರೀದಿಸಿ, ದಿನಸಿ ಕಿಟ್ ಜತೆಯಲ್ಲಿ ನೀಡುತ್ತೇವೆ’ ಎಂದು ಉಪೇಂದ್ರ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದರು. ಶನಿವಾರ ಮತ್ತೊಮ್ಮೆ ಟ್ವೀಟ್ ಮಾಡಿರುವ ಅವರು, ವ್ಯಾಪಾರವಾಗದೆ ಇರುವ ಬೆಳೆಯನ್ನು ಸೂಕ್ತ ಬೆಲೆಗೆ ಖರೀದಿಸಿ ಹಂಚುವುದಾಗಿ ಹೇಳಿದ್ದಾರೆ. ಬೆಳೆ ಯಾವುದು, ಎಷ್ಟು ತೂಕ ಇದೆ, ಅಂತಿಮ ಬೆಲೆ ಎಷ್ಟು, ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು? ಮುಂತಾದ ವಿವರಗಳನ್ನು 9845763396 ನಂಬರ್ಗೆ ವಾಟ್ಸಾಪ್ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ನುಡಿದಂತೆ ನಡೆದ ಶುಭಾ: ‘ಬಿಗ್ ಬಾಸ್’ ಮನೆಯಿಂದ ಹೊರಬಂದ ಬಳಿಕ ನಮ್ಮ ಕೈಲಾದ ಸೇವೆ ಸಲ್ಲಿಸುವುದಾಗಿ ನಟಿ ಶುಭಾ ಪೂಂಜಾ ತಿಳಿಸಿದ್ದರು. ಆ ಮಾತಿಗೆ ತಕ್ಕಂತೆ ಅವರು ನಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿನ ತಮ್ಮ ಮನೆ ಸುತ್ತಲಿನ ವಲಸೆ ಕಾರ್ವಿು ಕರಿಗೆ, ಬಡವರಿಗೆ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದ್ದಾರೆ.