ಪ್ರೀತಿ, ದೇಶಭಕ್ತಿ ಸಾರುವ ದೃಶ್ಯಕಾವ್ಯ ಇನ್​ ಹಿಸ್​ ನೇಮ್​ ಆಲ್ಬಂ ಸಾಂಗ್​

xcasaxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರೀತಿ, ಪ್ರೇಮಗಳ ಕುರಿತ ಆಲ್ಬಂ ಸಾಂಗ್​ಗಳು ಮೂಡಿಬರುವುದು ಸಾಮಾನ್ಯ. ಆದರೆ, "ಭಾವ ತೀರ ಯಾನ' ಖ್ಯಾತಿಯ ಮಯೂರ್​ ಅಂಬೆಕಲ್ಲು, ತೇಜಸ್​ ಕಿರಣ್​ ಮತ್ತು ಕಿರುತೆರೆ ನಟಿ ಚಂದನಾ ಅನಂತಕೃಷ್ಣ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪ್ರೀತಿಯ ಜತೆ ದೇಶಭಕ್ತಿಯನ್ನೂ ಸಾರುವ ನೈಜ ಘಟನೆ ಆಧಾರಿತ ಆಲ್ಬಂ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಹೆಸರು "ಇನ್​ ಹಿಸ್​ ನೇಮ್​'. ಹುಡುಗ, ಹುಡುಗಿಯನ್ನು ನೋಡಿ, ಇಬ್ಬರೂ ಒಪ್ಪಿ ಮದುವೆಯಾಗಿ, ಪ್ರವಾಸಕ್ಕೆ ಬಂದಿರುವಾಗ ಉಗ್ರರು ಪತಿಯನ್ನು ಕೊಲ್ಲುವ ಕುರಿತ ಪಹಲ್ಗಾಮ್​ ಉಗ್ರ ದಾಳಿಯ ಕಥೆಯನ್ನು ಕೇವಲ ಆರು ನಿಮಿಷಗಳಲ್ಲಿ ಹೇಳಿದ್ದು, ಸದ್ಯ ಈ ಆಲ್ಬಂ ಸಾಂಗ್​ ಜಾಲತಾಣದಲ್ಲಿ ವೈರಲ್​ ಆಗಿದೆ.

ಹಾಡಿಗೆ ಧ್ವನಿಯಾಗಿ, ನಟಿಸುವುದರ ಜತೆ ಜತೆಗೆ ಚಂದನಾ ಅನಂತಕೃಷ್ಣ ಈ ಹಾಡಿನ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವುದು ವಿಶೇಷ. ಅವರಿಗೆ ಜೋಡಿಯಾಗಿ ನಿದರ್ಶನ್​ ನಟಿಸಿದ್ದು, ಮಯೂರ್​ ಅಂಬೆಕಲ್ಲು ಸಂಗೀತ ನೀಡಿದ್ದು, ತೇಜಸ್​ ಕಿರಣ್​ ಜತೆ ನಿರ್ದೇಶಿಸಿದ್ದಾರೆ. ಉಳಿದಂತೆ "ಇನ್​ ಹಿಸ್​ ನೇಮ್​' ಭಾನುಪ್ರಕಾಶ್​ ಜೋಯಿಸ್​ ಸಾಹಿತ್ಯ, ಶಿವಶಂಕರ್​ ನೂರಂಬಡ ಛಾಯಾಗ್ರಹಣ ಮತ್ತು ಅನುರಂಜನ್​ ಎಚ್​.ಆರ್​. ಸಂಕಲನದಲ್ಲಿ ಮೂಡಿಬಂದಿದೆ.

ಪ್ರಾರಂಭದಲ್ಲಿ ಎಲ್ಲರಂತೆ ಒಂದು ರೊಮ್ಯಾಂಟಿಕ್​ ಸಾಂಗ್​ ಮಾಡಬೇಕೆಂದು, ಹಾಡನ್ನು ರೆಡಿ ಮಾಡಿಕೊಂಡಿದ್ದೆವು. ಪಹಲ್ಗಾಮ್​ ಟನೆಯ ಬಳಿಕ, ನಮ್ಮ ಸಾಂಗ್​ ಮೂಲಕ ಉತ್ತಮ ಸಂದೇಶ ನೀಡಬೇಕು ಅಂತನ್ನಿಸಿ, ಪ್ಯಾಥೋ ಭಾಗ ಸೇರಿಸಿದೆವು. ತಲಾ ಒಂದು ದಿನ ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಣ ನಡೆಸಿದೆವು. ಇದೀಗ ಸಾಂಗ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಖುಷಿ ನೀಡಿದೆ

- ಮಯೂರ್​ ಅಂಬೆಕಲ್ಲು, ಸಂಗೀತ ನಿರ್ದೇಶಕ

ಈ ಹಾಡನ್ನು ರೆಕಾರ್ಡ್​ ಮಾಡುವಾಗ, ವಿಡಿಯೋ ಸಾಂಗ್​ ಮಾಡೋಣ ಅಂತನ್ನಿಸಿತು. ನನ್ನ ಮದುವೆಯಾಗಿದ್ದು ಕಳೆದ ನವೆಂಬರ್​ನಲ್ಲಿ. ಪಹಲ್ಗಾಂ ದಾಳಿ ನಡೆದಿದ್ದು, ಇದೇ ಏಪ್ರಿಲ್​ನಲ್ಲಿ. ನವವಿವಾಹಿತೆಯೊಬ್ಬಳ ಎದುರೇ ಆಕೆಯ ಪತಿಯನ್ನು ಹತ್ಯೆ ಮಾಡಿರುವ ಪಹಲ್ಗಾಂ ಟನೆ ನನ್ನಲ್ಲೂ ನೋವುಂಟು ಮಾಡಿತ್ತು. ಹೀಗಾಗಿ ಮಯೂರ್​, ತೇಜಸ್​ ಈ ಟನೆಯ ಹಿನ್ನೆಲೆಯಲ್ಲಿ ಸಾಂಗ್​ ಮಾಡುವ ಬಗ್ಗೆ ಹೇಳಿದಾಗ ತಕ್ಷಣ ಒಪ್ಪಿಕೊಂಡೆ. ಸಿನಿಮಾ ಅಥವಾ ವೆಬ್​ಸರಣಿ ಆಗುವ ಕಥೆಯಿದು. ಅದನ್ನು ಕೇವಲ ಆರು ನಿಮಿಷಗಳಲ್ಲಿ ಜನರಿಗೆ ಮನಮುಟ್ಟುವಂತೆ ಹೇಳುವುದು ಸವಾಲಿನ ಕೆಲಸವಾಗಿತ್ತು.

- ಚಂದನಾ ಅನಂತಕೃಷ್ಣ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net