ಓಡಿ ಹೋಗ್ಬೇಕು ಅಂದ್ಕೊಂಡಿದ್ದೆ!

Kangana 27 June 20
Published on

ಕಂಗನಾ ರಣಾವತ್ ತಮ್ಮ ಚಿತ್ರಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡವರು. ಬಾಲಿವುಡ್​ನ ಅತ್ಯಂತ ವಿವಾದಾತ್ಮಕ ನಟಿ ಎಂಬ ಕುಖ್ಯಾತಿಗೆ ಪಾತ್ರರಾದವರು. ಅಷ್ಟೆಲ್ಲ ನಡೆಯುವಾಗ, ಯಾವತ್ತಾದರೂ ಆತ್ಮಹತ್ಯೆ ಯೋಚನೆ ಸುಳಿದಿತ್ತಾ? ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಇತ್ತೀಚೆಗೆ ಮಾತನಾಡಿರುವ ಅವರು, ಆತ್ಮಹತ್ಯೆಯಲ್ಲದಿದ್ದರೂ ಎಲ್ಲರಿಂದ ದೂರ ಹೋಗುವ ಯೋಚನೆ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನಾಲ್ಕು ವರ್ಷಗಳ ಹಿಂದೆ ಆಗ ನಂಬರ್ ಒನ್ ಸ್ಥಾನದಲ್ಲಿದ್ದೆ. 19 ಬ್ರಾಂಡ್​ಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಅದರಿಂದ ಬಂದ ಹಣವನ್ನು ಸಾಕಷ್ಟು ಹೂಡಿಕೆ ಮಾಡಿದ್ದೆ. ಹೀಗಿರುವಾಗ, ಅದೊಂದು ದಿನ ನನ್ನ ಎಕ್ಸ್ ಬಾಯ್ಫ್ರೆಂಡ್ ನನ್ನ ಮೇಲೆ ಕೇಸು ಹಾಕಿದರು. ಅದೊಂದು ಚಿಲ್ಲರೆ ಕೇಸು. ಆದರೂ ಸಾಕಷ್ಟು ಸಮಸ್ಯೆಯಾಯಿತು. ಅದರಿಂದಾಗಿ ಎಲ್ಲ ಬ್ರಾಂಡ್​ಗಳ ಒಪ್ಪಂದದಿಂದ ಹಿಂದೆ ಸರಿಯಬೇಕಾಯಿತು. ಆ ಹಣ ನಂಬಿ, ಹೂಡಿಕೆ ಮಾಡಿದ್ದರಿಂದ ದೊಡ್ಡ ಸಮಸ್ಯೆಗೆ ಗುರಿಯಾದೆ’ ಎಂದು ಹೇಳಿಕೊಂಡಿದ್ದಾರೆ ಕಂಗನಾ.

ಬರೀ ಹಣಕಾಸಿನ ಸಮಸ್ಯೆಯಷ್ಟೇ ಅಲ್ಲ, ತಮ್ಮ ವಿರುದ್ಧ ಸಾಕಷ್ಟು ಆರೋಪಗಳನ್ನೂ ಈ ಸಂದರ್ಭದಲ್ಲಿ ಮಾಡಲಾಯಿತು ಎಂದಿರುವ ಅವರು, ‘ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದರು. ಮ್ಯಾನ್-ಈಟರ್, ನಿಂಫೋಮ್ಯಾನಿಯಾಕ್ ಅಂತೆಲ್ಲ ಬಿರುದುಗಳನ್ನು ಕೊಟ್ಟರು. ಅಲ್ಲಿಯವರೆಗೂ ನನ್ನನ್ನು ಮದುವೆಯಾಗುವುದಕ್ಕೆ ಕೆಲವರು ಆಸೆಪಟ್ಟಿದ್ದರು. ಆ ನಂತರ ಮದುವೆಯೆಂಬ ಆಯ್ಕೆಯೇ ನನ್ನ ಜೀವನದಲ್ಲಿರಲಿಲ್ಲ. ಆ ಸಂದರ್ಭದಲ್ಲೇ ನನಗೆ, ಎಲ್ಲರಿಂದ ದೂರ ಓಡಿ ಹೋಗುವ ಯೋಚನೆ ಬಂದಿದ್ದು. ಹಳ್ಳಿಯಲ್ಲಿ ನೆಮ್ಮದಿಯಾಗಿ ಕೃಷಿ ಮಾಡಿಕೊಂಡಿರುವ ಆಸೆಯಾಗಿದ್ದು. ಆದರೆ, ಕ್ರಮೇಣ ಇದೆಲ್ಲವನ್ನೂ ಮೆಟ್ಟಿ ನಿಂತೆ’ ಎಂದು ನೆನಪಿಸಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net