ಪರಭಾಷೆಯ ಸಿನಿಮಾ ಬಂದ್ರೆ ಕನ್ನಡ ಸಿನಿಮಾ ಬಿಡುಗಡೆ ಮಾಡೋಕೆ ಭಯಪಡುವ ಸ್ಥಿತಿ ಇದೆ!

1204459
Published on

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳ ಹಾವಳಿ ಎಷ್ಟರಮಟ್ಟಿಗೆ ಇದೆ ಎಂದರೆ, ತಮಿಳು-ತೆಲುಗು-ಹಿಂದಿ ಸಿನಿಮಾ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಕನ್ನಡ ಸಿನಿಮಾ ಬಿಡುಗಡೆ ಮಾಡಲು ನಾವು ಭಯಪಡಬೇಕಾಗಿದೆ ಎಂದು 'ಲವ್ ಯೂ ರಚ್ಚು' ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಹೇಳಿದ್ದಾರೆ.

ತಮ್ಮ ಚಿತ್ರದ ಟ್ರೇಲರ್​ ಲಾಂಚ್ ಸಮಾರಂಭದಲ್ಲಿ ಭಾಗವಹಿಸಿದ ವೇಳೆ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಪರಭಾಷೆ ಸಿನಿಮಾಗಳಿಂದಾಗಿ 'ಲವ್ ಯೂ ರಚ್ಚು' ಸಿನಿಮಾಕ್ಕೂ ಥಿಯೇಟರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದೇ ಇದೆ. ಇದು ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಪರಿಹರಿಸಬಹುದಾದ ಸಮಸ್ಯೆ ಅಲ್ಲ. ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರು ಮನಸ್ಸು ಮಾಡಿದರೆ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಹೇಳಿದರು.

ಮನಸಿದೆಯೋ ಇಲ್ಲವೋ ನಾವು ಈಗಾಗಲೇ ಡಬ್ಬಿಂಗ್ ಒಪ್ಪಿಕೊಂಡು ಬಿಟ್ಟಿದ್ದೇವೆ. ಆದರೆ ಯಾವುದಾದರೂ ಸಿನಿಮಾ ಕನ್ನಡದಲ್ಲಿ ಡಬ್ ಆದರೆ ಅದರ ಕನ್ನಡ ಅವತರಣಿಕೆ ಮಾತ್ರ ಕರ್ನಾಟಕಕ್ಕೆ ಬರಬೇಕು. ತೆಲುಗು, ತಮಿಳು, ಮಲಯಾಳಂ, ಹಿಂದಿ ಅವತರಣಿಕೆಗಳೂ ಬಂದರೆ ಎಲ್ಲಿಂದ ಜನ ಕನ್ನಡ ಸಿನಿಮಾಗಳನ್ನು ನೋಡ್ತಾರೆ? ನಮ್ಮ ಸಿನಿಮಾಗೆ ಕೂಡ ಸಮಸ್ಯೆ ಆಗಲಿದೆ. ನಮ್ಮದು 31ಕ್ಕೆ ರಿಲೀಸ್ ಆಗುತ್ತಿದೆ. 7ನೇ ತಾರೀಖಿಗೆ ದೊಡ್ಡ ಬಹುಭಾಷಾ ಸಿನಿಮಾ ಬರಲಿದೆ. ಅವರು 450-500 ಥಿಯೇಟರ್‌ಗಳನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಸಹಜವಾಗಿಯೇ ನಮಗೆ ಥಿಯೇಟರ್ ಸಮಸ್ಯೆ ಉಂಟಾಗುತ್ತದೆ ಎಂದು ಗುರು ದೇಶಪಾಂಡೆ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net