ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ತೊಡುವುದಿಲ್ಲವಂತೆ ಸ್ನೇಹಾ! ಸೌತ್​​ ಬ್ಯೂಟಿ ಕೊಟ್ಟ ಕಾರಣ ಕೇಳಿ ದಂಗಾದ್ರು ಫ್ಯಾನ್ಸ್​!

Actress Sneha
Published on

ಚೆನ್ನೈ: ನಟಿ ಸ್ನೇಹಾ ಅವರು ಒಂದು ಕಾಲದಲ್ಲಿ ಯುವಕರ ಪಾಲಿನ ಕನಸಿನ ಹುಡುಗಿಯಾಗಿದ್ದರು. ಸ್ಟಾರ್​ ನಟ ಜತೆಯಲ್ಲಿ ನಟಿಸಿರುವ ಸ್ನೇಹಾ, ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಕನ್ನಡದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ರವಿಶಾಸ್ತ್ರಿ, ಪ್ರಕಾಶ್​ ರಾಜ್​ ನಟನೆಯ ಒಗ್ಗರಣೆ ಹಾಗೂ ದರ್ಶನ್​ ಅಭಿನಯದ ಕುರುಕ್ಷೇತ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ತಮ್ಮ ಸೌಂದರ್ಯದಿಂದಲೇ ಸ್ನೇಹಾ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಸ್ನೇಹಾ ಅವರು ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂನಲ್ಲೂ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 2000 ದಿಂದ 2010ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ನಗುವಿನ ರಾಣಿ ಎಂದೇ ಖ್ಯಾತಿ ಗಳಿಸಿದ್ದರು. ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಟ ಪ್ರಸನ್ನ ಅವರ ಪ್ರೀತಿಯ ಬಲೆಯಲ್ಲಿ ಬಿದ್ದು 2012ರಲ್ಲಿ ಮದುವೆಯಾದರು. ದಂಪತಿಗೆ ವಿಗಾನ್ ಎಂಬ ಮಗ ಮತ್ತು ಅದ್ಯಂತಾ ಎಂಬ ಮಗಳಿದ್ದಾಳೆ.

ಸದ್ಯ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿರುವ ಸ್ನೇಹಾ, ಹೊಸ ಸೀರೆ ವ್ಯಾಪಾರ ಶುರು ಮಾಡಿದ್ದಾರೆ. ತಾಜಾ ಸಂಗತಿ ಏನೆಂದರೆ, ಸ್ನೇಹಾ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ನೇಹಾ ಅವರು ಯಾವಾಗಲೂ ಒಂದೇ ರೀತಿಯ ಉಡುಪನ್ನು ಧರಿಸುತ್ತಾರೆ ಮತ್ತು ಅವರಿಗೆ ಧರಿಸಲು ಬೇರೆ ಬಟ್ಟೆಗಳಿಲ್ಲ ಎಂದು ಒಮ್ಮೆ ಜನಪ್ರಿಯ ಮ್ಯಾಗಜಿನ್ ಒಂದು​ ಸುದ್ದಿ ಪ್ರಕಟಿಸಿದ್ದನ್ನು ಸ್ನೇಹಾ ವಿಡಿಯೋದಲ್ಲಿ ನೆನಪಿಸಿಕೊಂಡಿದ್ದಾರೆ.

ನನ್ನ ಉಡುಪಿನ ಬಗ್ಗೆ ನನಗೆ ಸಾಕಷ್ಟು ಟೀಕೆಗಳು ಬಂದಿವೆ. ಹೀಗಾಗಿ ನಾನು ಒಮ್ಮೆ ಧರಿಸಿದ ಬಟ್ಟೆಯನ್ನು ಎಂದಿಗೂ ಧರಿಸಲ್ಲ ಎಂದಿದ್ದಾರೆ. ಒಮ್ಮೆ ಹೊಸ ಉಡುಗೆ ಧರಿಸಿದ ಬಳಿಕ ಅದನ್ನು ಗೊತ್ತಿರುವವರಿಗೆ ಅಥವಾ ಫ್ರೆಂಡ್ಸ್​ಗೆ ಕೊಡುತ್ತೇನೆ. ಒಮ್ಮೆ ಹಾಕಿದ ಡ್ರೆಸ್ ಅನ್ನು ಮತ್ತೆ ಹಾಕಿಕೊಳ್ಳುವುದಿಲ್ಲ ಎಂದು ಸ್ನೇಹಾ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸ್ನೇಹಾ ಅವರು ಸದ್ಯ ನಟ ವಿಜಯ್​ ಅಭಿನಯದ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸ್ಟಾರ್​ ಡೈರೆಕ್ಟರ್​ ವೆಂಕಟ್​ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net