ನಾನು 41 ಧರಿಸುತ್ತೇನೆ…ಇಲ್ಲೇ ಬೇಕಾ ಅಥವಾ ಎಲ್ಲರ ಮುಂದೆ ಕೊಡ್ಲಾ! ನಿರ್ಮಾಪಕನಿಗೆ ಖುಷ್ಬೂ ವಾರ್ನಿಂಗ್

Khushbu Sundar
Published on

ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಹೇಮಾ ಸಮತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಹಾಗೂ ನಟಿ ಖುಷ್ಬೂ ತಮಗಾದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದು, ನಿರ್ಮಾಪಕರುಗಳಿಗೆ ಖಡಕ್​ ಎಚ್ಚರಿಕೆಯನ್ನು ನೀಡಿದ್ದಾರೆ.

ದಕ್ಷಿಣ ಭಾರತದ ಸಿನಿರಂಗದ ಆರಂಭದಲ್ಲಿ ನಾನು ನಿರ್ಮಾಪಕರೊಬ್ಬರಿಂದ ಕಿರುಕುಳ ಅನುಭವಿಸಿದ್ದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಖುಷ್ಬೂ ಹೇಳಿಕೊಂಡಿದ್ದಾರೆ.

ನಾನು ಚಿತ್ರರಂಗದಲ್ಲಿ ಒಂಟಿಯಾಗಿದ್ದೇನೆ ಎಂಬ ಕಾರಣಕ್ಕೆ ನಿರ್ಮಾಪಕರೊಬ್ಬರು ನನ್ನನ್ನು ಸಂಪರ್ಕಿಸಿದರು. ನನಗೆ ಗಾಡ್ ಫಾದರ್ ಅಂತ ಆಗ ಯಾರು ಇರಲಿಲ್ಲ. ಹಾಗಾಗಿ ನಾನು ಸುಲಭವಾಗಿ ಒತ್ತಡಕ್ಕೆ ಮಣಿಯುತ್ತೇನೆಂದು ಆ ನಿರ್ಮಾಪಕ ಅಂದುಕೊಂಡಿದ್ದರು. ತೆಲುಗು ಸಿನಿಮಾವೊಂದರ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ನಿರ್ಮಾಪಕ ನನ್ನ ಮೇಕಪ್ ರೂಮ್​ಗೆ ಪ್ರವೇಶಿಸಿ, ಪರೋಕ್ಷವಾಗಿ ತನ್ನ ಬಯಕೆ ಈಡೇರಿಸುವ ಮಾತಗಳನ್ನಾಡಿದರು. ಅದನ್ನು ನಾನು ಅರ್ಥ ಮಾಡಿಕೊಂಡೆ ಮತ್ತು ನನ್ನ ಚಪ್ಪಲಿಗಳನ್ನು ತೆಗೆದು ನಾನು 41 (ಚಪ್ಪಲಿ ಗಾತ್ರ) ಧರಿಸುತ್ತೇನೆ ಎಂದು ಹೇಳಿದೆ. ನಿಮಗೆ ಇಲ್ಲಿಯೇ ಕಪಾಳಮೋಕ್ಷ ಮಾಡಬೇಕೇ ಅಥವಾ ಎಲ್ಲರ ಮುಂದೆ ಹೊಡೆಯಬೇಕೇ ಎಂದು ಕೇಳಿದೆ. ಆ ಬಳಿಕ ನಿರ್ಮಾಪಕ ಅಲ್ಲಿಂದ ಹೊರಟು ಹೋದರು ಎಂದು ಖುಷ್ಬೂ ಹೇಳಿದರು.

ಇನ್ನು ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬಳಿಕ ಮಹಿಳೆಯರೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಪುರುಷರು ಕೂಡ ಮುಂದೆ ಬಂದು ಮಹಿಳೆಯರ ಪರವಾಗಿ ಧ್ವನಿ ಎತ್ತಬೇಕು ಎಂದು ಖುಷ್ಬೂ ಕೇಳಿಕೊಂಡರು.

ಇದಕ್ಕೂ ಮುಂಚೆ ಹೇಮಾ ಸಮಿತಿ ವರದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಖುಷ್ಬೂ, ನಿಮ್ಮ ಬಹಿರಂಗ ಇಂದು ಅಥವಾ ನಾಳೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಬೇಗ ಹೇಳುತ್ತೀರೋ ಅಷ್ಟು ಬೇಗ ನಿಮ್ಮ ಗಾಯಗಳು ಗುಣವಾಗುತ್ತವೆ ಮತ್ತು ತನಿಖೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಂತ್ರಸ್ತರು ನಿಮಗೆ ಮತ್ತು ನನಗೆ ಅಪರಿಚಿತರಾಗಿರುತ್ತಾರೆ ಆದರೆ, ಅವರಿಗೆ ನಮ್ಮ ಬೆಂಬಲ ಬೇಕಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ತಂದೆಯ ಕಿರುಕುಳದ ಬಗ್ಗೆ ಮಾತನಾಡಿದ ಖುಷ್ಬೂ, ನನ್ನನ್ನು ರಕ್ಷಿಸಬೇಕಾಗಿದ್ದ ಬಲಿಷ್ಠ ತೋಳುಗಳಿಂದ ನಾನು ಶೋಷಣೆಗೆ ಒಳಗಾಗಿದ್ದೆ. ಈ ಶೋಷಣೆ ನಿಲ್ಲಬೇಕು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬೇಡಿ ಎಂದು ಕರೆ ನೀಡಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net