ಆ ಒಂದು ಕಾರಣಕ್ಕೆ ರಾತ್ರೋರಾತ್ರಿ 9 ಸಿನಿಮಾದಿಂದ ನನ್ನನ್ನು ತೆಗೆದುಹಾಕಿದ್ರು: ವಿದ್ಯಾ ಬಾಲನ್ ಬಿಚ್ಚಿಟ್ಟ ಕಹಿ ಸತ್ಯವಿದು! Vidya Balan ​

Vidya Balan
Published on

Vidya Balan : ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರುವುದು ಅಂದರೆ ತುಂಬಾ ಸುಲಭವಲ್ಲ. ಅದಕ್ಕಾಗಿ ಶ್ರಮದ ಜೊತೆಗೆ ಅದೃಷ್ಟವೂ ಬೇಕು. ಈಗ ಸ್ಟಾರ್ ಸ್ಥಾನದಲ್ಲಿರುವವರೆಲ್ಲರೂ ಒಂದು ಕಾಲದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ ಬಳಿಕ ಈ ಮಟ್ಟಕ್ಕೆ ಬೆಳೆದಿದ್ದಾರೆ. ವಿಶೇಷವಾಗಿ ನಾಯಕಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ನಾಯಕಿಯರು ಒಂದೇ ಒಂದು ಅವಕಾಶಕ್ಕಾಗಿ ವರ್ಷಗಟ್ಟಲೇ ಕಾದು ಕುಳಿತಂತಹ ಉದಾಹರಣೆಗಳಿವೆ. ಅದೇ ರೀತಿ ತಮಗೆ ಸಿಕ್ಕ ಒಂದೇ ಒಂದು ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಈಗ ಸ್ಟಾರ್ ನಾಯಕಿಯರಾಗಿದ್ದಾರೆ. ಬಾಲಿವುಡ್ ನಾಯಕಿ ವಿದ್ಯಾ ಬಾಲನ್ ಅವರೇ ಇದಕ್ಕೆ ಉದಾಹರಣೆ. ಅವರೇ ಹೇಳುವಂತೆ ಎಲ್ಲರಂತೆ, ವೃತ್ತಿಜೀವನದ ಆರಂಭದಲ್ಲಿ ತಾವು ಕೂಡ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ ಎಂದಿದ್ದಾರೆ.

ಸದ್ಯ ಪ್ಯಾನ್-ಇಂಡಿಯಾ ನಾಯಕಿಯಾಗಿರುವ ಈ ಪ್ರತಿಭಾನ್ವಿತ ನಟಿಯನ್ನು ಆರಂಭದಲ್ಲಿ 'ಐರನ್ ಲೆಗ್' ಎಂಬ ಹಣೆಪಟ್ಟಿ ಕಟ್ಟಲಾಗಿತ್ತು ಮತ್ತು ರಾತ್ರೋರಾತ್ರಿ 9 ಯೋಜನೆಗಳಿಂದ ತೆಗೆದುಹಾಕಲಾಗಿತ್ತು. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿದ್ಯಾ ಬಾಲನ್ ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನನ್ನ ವೃತ್ತಿಜೀವನದ ಆರಂಭದಲ್ಲಿ, ಮೋಹನ್ ಲಾಲ್ ಅವರೊಂದಿಗೆ 'ಚಕ್ರ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಚಿತ್ರೀಕರಣ ಪ್ರಾರಂಭವಾದ ಕೆಲವು ವರ್ಷಗಳ ನಂತರ ಆ ಸಿನಿಮಾವನ್ನು ಅನಿರೀಕ್ಷಿತವಾಗಿ ನಿಲ್ಲಿಸಲಾಯಿತು. ಅದಕ್ಕೆ ನಾನೇ ಕಾರಣ ಎಂದು ಪ್ರಚಾರ ಮಾಡಲಾಯಿತು. ಅಲ್ಲದೆ, ನನಗೆ 'ಐರನ್ ಲೆಗ್' ಎಂದು ಹಣೆಪಟ್ಟಿ ಕಟ್ಟಲಾಯಿತು ಮತ್ತು ತೀವ್ರವಾಗಿ ಟೀಕಿಸಲಾಯಿತು ಎಂದರು.

'ಚಕ್ರ' ಸಿನಿಮಾ ನಿಂತಿದೆ ಎಂದು ತಿಳಿದಾಗ, ನಾನು ಒಪ್ಪಿಕೊಂಡಿದ್ದ 9 ಸಿನಿಮಾಗಳಿಂದ ರಾತ್ರೋರಾತ್ರಿ ನನ್ನನ್ನು ತೆಗೆದುಹಾಕಲಾಯಿತು. ವಾಸ್ತವವಾಗಿ, ಚಿತ್ರವನ್ನು ನಿಲ್ಲಿಸಲು ನಾನು ಕಾರಣಳಲ್ಲ. ಆ ಚಿತ್ರದ ನಿರ್ದೇಶಕ ಮತ್ತು ಮೋಹನ್ ಲಾಲ್ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಆ ಸಿನಿಮಾ ಅರ್ಧಕ್ಕೆ ನಿಂತಿತು ಎಂದು ವಿದ್ಯಾ ಬಾಲನ್​ ತಿಳಿಸಿದ್ದಾರೆ.

9 ಸಿನಿಮಾಗಳಿಂದ ನನ್ನನ್ನು ಏಕಾಏಕಿ ಕೈಬಿಟ್ಟಿದ್ದು, ನನ್ನ ವೃತ್ತಿಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಆದರೆ, ನಾನು ಮಾತ್ರ ಧೈರ್ಯ ಕಳೆದುಕೊಳ್ಳಲಿಲ್ಲ. ಆಗುವುದೆಲ್ಲ ಒಳ್ಳೆಯದ್ದಕ್ಕೆ ಎಂಬ ಮನೋಭಾವದಿಂದಲೇ ನಾನು ಆತ್ಮವಿಶ್ವಾಸದಿಂದ ಮುಂದೆ ಸಾಗಿದೆ. ನನ್ನ ಮೇಲೆ ನನಗಿದ್ದ ನಂಬಿಕೆಯೇ ಇಂದು ನನ್ನನ್ನು ಈ ಮಟ್ಟದಲ್ಲಿ ನಿಲ್ಲುವಂತೆ ಮಾಡಿತು. ನಾವು ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ, ಒಂದು ದಿನ ಅದು ಖಂಡಿತವಾಗಿಯೂ ನಮ್ಮದಾಗಲಿದೆ ಎಂದು ವಿದ್ಯಾ ಹೇಳಿದರು.

ಅಂದಹಾಗೆ, ವಿದ್ಯಾ ಬಾಲನ್​ ಅವರು 2005ರಲ್ಲಿ ತೆರೆಕಂಡ ಪರಿಣೀತಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 'ದಿ ಡರ್ಟಿ ಪಿಕ್ಚರ್' ಮೂಲಕ ಭಾರಿ ಯಶಸ್ಸನ್ನು ಗಳಿಸಿದರು. ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಚಿತ್ರದಲ್ಲಿ ವಿದ್ಯಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿಮರ್ಶಕರು ಕೂಡ ವಿದ್ಯಾ ಬಾಲನ್​ ಅವರ ಅಭಿನಯವನ್ನು ಮನಸಾರೆ ಶ್ಲಾಘಿಸಿದರು. ಈ ಸಿನಿಮಾ ಬಳಿಕ ವಿದ್ಯಾ ಅವರು ಮಹಿಳಾ ಪ್ರಧಾನ ಚಲನಚಿತ್ರಗಳ ಸರಣಿಯನ್ನು ಮಾಡಿದರು. ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಿಶೇಷ ಮನ್ನಣೆಯನ್ನು ಗಳಿಸಿದರು. ಇತ್ತೀಚೆಗೆ, ವಿದ್ಯಾ ಅವರು ಭೂಲ್ ಭುಲಯ್ಯ 3 ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದು ಮತ್ತೊಂದು ದೊಡ್ಡ ಹಿಟ್ ಗಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net