

Actor Vishal : ದಶಕಕ್ಕೂ ಹೆಚ್ಚು ಕಾಲ ಬಿಡುಗಡೆಗೆ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಚಿತ್ರ ಮದಗಜರಾಜ ಇದೇ ಜನವರಿ 12 ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ನಿರ್ದೇಶಕ ಸುಂದರ್ ಸಿ ಅವರು ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ನಾಯಕ ವಿಶಾಲ್ ಜತೆಗಿನ ವಿಶೇಷ ಬಾಂಧವ್ಯದ ಬಗ್ಗೆ ಮೆಲಕು ಹಾಕಿದರು.
ಇತ್ತೀಚೆಗೆ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ತೀವ್ರ ಜ್ವರದ ನಡುವೆಯೂ ವಿಶಾಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ವಿಶಾಲ್ ಅವರ ಕೈಗಳು ನಡುಗುತ್ತಿದ್ದವು ಮತ್ತು ಮಾತುಗಳು ತೊದಲಿಸುತ್ತಿದ್ದವು. ತನ್ನ ಆರೋಗ್ಯ ಸಮಸ್ಯೆಯನ್ನು ಬದಿಗಿಟ್ಟು ವಿಶಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಶಾಲ್ ಅವರ ಈ ಬದ್ಧತೆಯನ್ನು ನೋಡಿದ ನಿರ್ದೇಶಕ ಸುಂದರ್ ಸಿ, ಕಾರ್ಯಕ್ರಮದಲ್ಲಿ ತುಂಬಾ ಭಾವುಕರಾದರು.
ಸಂದರ್ಶನದಲ್ಲಿ ತಮ್ಮ ಒಡನಾಟದ ಬಗ್ಗೆ ಸುಂದರ್ ಸಿ ಮಾತನಾಡಿದ್ದಾರೆ. ನಾವು ಸ್ನೇಹಿತರಾದ ರೀತಿಯೇ ಒಂದು ಸಿನಿಮಾ ಕತೆಯಂತಿದೆ. ಆರಂಭದಲ್ಲಿ ನನಗೆ, ವಿಶಾಲ್ ಅವರ ಪರಿಚಯವಿರಲಿಲ್ಲ. ಆದರೆ, ವಿಶಾಲ್ ಮತ್ತು ನನ್ನ ಪತ್ನಿ ಖುಷ್ಬೂ ತುಂಬಾ ಒಳ್ಳೆಯ ಸ್ನೇಹಿತರು. ಸಿನಿಮಾವೊಂದಕ್ಕೆ ಅವರನ್ನು ಸಂಪರ್ಕಿಸಲು ನಿರ್ಧರಿಸಿದಾಗ ಅವರ ನಿರ್ಮಾಣ ಸಂಸ್ಥೆಯ ಮೂಲಕ ಸಂಪರ್ಕಿಸಿ, ಭೇಟಿಗೆ ಒಂದು ಸಮಯವನ್ನು ನಿಗದಿಪಡಿಸಿದೆವು.
ನಾನು ಮತ್ತು ನನ್ನ ಸಹಾಯಕ ಬರಹಗಾರ ನಿಗದಿತ ಸಮಯಕ್ಕೆ ವಿಶಾಲ್ ಅವರನ್ನು ಭೇಟಿಯಾಗಲು ಹೋದೆವು. ಆದರೆ, ಹೇಳಿದ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿಯೇ ವಿಶಾಲ್ ಅವರು ಹೊರ ಹೋಗುತ್ತಿರುವುದನ್ನು ಸಹಾಯಕ ಬರಹಗಾರ ನೋಡಿ, ನನಗೆ ತಿಳಿಸಿದ. ಆದರೆ, ನಾನದನ್ನು ಗಮನಿಸಲಿಲ್ಲ. ನಾನು ವಿಶಾಲ್ ಅವರ ಆಫೀಸ್ ಒಳಗೆ ಹೋದಾಗ ಅಷ್ಟರಲ್ಲಾಗಲೇ ಆತ ಅಲ್ಲಿಂದ ಹೊರಟು ಹೋಗಿದ್ದ. ಇದರಿಂದ ನನಗೆ ತುಂಬಾ ಕೋಪ ಬಂತು ಮತ್ತು ಅಲ್ಲಿಂದ ಹೊರಟು ಬಂದೆ. ಅಂದು ರಾತ್ರಿ ನನ್ನ ಪತ್ನಿ ಖುಷ್ಬೂಗೆ ಈ ವಿಚಾರವನ್ನು ತಿಳಿಸಿದೆ. ನನ್ನ ಪರವಾಗಿ ವಿಶಾಲ್ ಜತೆ ಮಾತನಾಡುವುದಾಗಿ ಹೇಳಿದರು. ಆದರೆ, ನಾನು ಬೇಡ ಎಂದು ತಡೆದೆ.
ಈ ಘಟನೆ ನಡೆದು ಎರಡು ತಿಂಗಳುಗಳು ಕಳೆದವು. ಒಂದು ದಿನ ನಾನು ಹಿರಿಯ ನಟಿ ಎಂ.ಎನ್. ರಾಜಮ್ ಅವರನ್ನು ಸನ್ಮಾನಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಈ ವೇಳೆ ವಿಶಾಲ್ ಅವರು ಸಭಾಂಗಣವನ್ನು ಪ್ರವೇಶಿಸಿದಾಗ ನನಗೆ ತುಂಬಾ ಕೋಪ ಬಂತು. ನಾನು ಅವರ ಮುಖವನ್ನು ಇನ್ನೆಂದು ನೋಡಬಾರದೆಂದು ಪ್ರಮಾಣ ಮಾಡಿದ್ದೆ. ಹೀಗಾಗಿ ನಾನು ಅವರತ್ತ ನೋಡಲೇ ಇಲ್ಲ. ಆದರೆ, ವಿಶಾಲ್ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ. ನನ್ನ ಬಳಿ ಬಂದು ಕ್ಷಮೆ ಕೋರಿದರು. ನಾನು ಅವರ ಆಫೀಸ್ಗೆ ಭೇಟಿ ನೀಡಿದ ದಿನ ವಿಶಾಲ್ ಆಪ್ತರಿಗೆ ವೈದ್ಯಕೀಯ ತುರ್ತುಸ್ಥಿತಿ ಇದ್ದಿದ್ದರಿಂದ ಅವರು ಅಲ್ಲಿಂದ ಹೊರಟು ಹೋಗಿದ್ದರು.
ವಿಶಾಲ್ ಅವರ ಪರಿಚಯದ ನಂತರ, ಅವರೆಷ್ಟು ಒಳ್ಳೆಯವರು ಎಂಬುದನ್ನು ನಾನು ಅರಿತುಕೊಂಡೆ. ನಾನು ಅನೇಕ ನಾಯಕರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ, ವಿಶಾಲ್ ತುಂಬಾ ಇಷ್ಟವಾದರು. ವಿಶಾಲ್ನನ್ನ ನನ್ನ ಕಿರಿಯ ಸಹೋದರ ಎಂದು ಭಾವಿಸುತ್ತೇನೆ ಎಂದು ಸುಂದರ್ ಸಿ ತಿಳಿಸಿದರು. (ಏಜೆನ್ಸೀಸ್)