

Nithya Menen : ನಟಿ ನಿತ್ಯಾ ಮೆನನ್ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.
ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ. ಇನ್ನು ಸಿನಿಮಾ ದೊಡ್ಡದಾದಷ್ಟೂ ಸಂಭಾವನೆ ಕೂಡ ಹೆಚ್ಚುತ್ತದೆ ಎಂಬ ಕಾರಣಕ್ಕೆ ದೊಡ್ಡ ಚಿತ್ರಗಳನ್ನು ನಿತ್ಯಾ ಒಪ್ಪುವುದಿಲ್ಲ. ತಮ್ಮ ಪಾತ್ರಕ್ಕೆ ಆದ್ಯತೆ ನೀಡಿದರೆ ಮಾತ್ರ ಅದರಲ್ಲಿ ನಟಿಸುತ್ತಾರೆ. ಹೀಗಾಗಿ ತಾನು ನಿರ್ವಹಿಸಿದ ಪಾತ್ರಗಳಿಗೆ ಸಾಕಷ್ಟು ಚಪ್ಪಾಳೆ ಗಿಟ್ಟಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಅವರು ಆಸಕ್ತಿಕರ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ತಾನು ಮದುವೆಯಾಗದಿರುವುದಕ್ಕೆ ಕಾರಣವನ್ನು ನೀಡಿದ್ದಾರೆ. ಅಂದಹಾಗೆ, ನಿತ್ಯಾ ಮೆನನ್ ಅವರ ವಯಸ್ಸು 37. ಹೀಗಾಗಿ ಅವರು ಎಲ್ಲೇ ಹೋದರು ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ ಏನೆಂದರೆ, ಮದುವೆ ಯಾವಾಗ ಎಂಬುದು. ಅಲ್ಲದೆ, ಮದುವೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗಳು ಸಹ ಕೇಳಿಬರುತ್ತವೆ. ಇದೀಗ ಆ ಪ್ರಶ್ನೆಗಳಿಗೆ ನಿತ್ಯಾ ಉತ್ತರ ಕೊಟ್ಟಿದ್ದಾರೆ.
ಪ್ರಸ್ತುತ, ನಿತ್ಯಾ ಮೆನನ್ ಅವರು ಪಾಂಡಿರಾಜ್ ನಿರ್ದೇಶನದ ವಿಜಯ್ ಸೇತುಪತಿ ನಾಯಕನಾಗಿ ನಟಿಸುತ್ತಿರುವ "ತಲೈವನ್ ತಲೈವಿ" ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಜುಲೈ 25 ರಂದು ಬಿಡುಗಡೆಯಾಗಲಿದ್ದು, ಸದ್ಯ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತುಂಬಾ ಬಿಜಿಯಾಗಿದೆ. ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಿತ್ಯಾ ಮೆನನ್, ಸಿನಿಮಾ ಮಾತ್ರವಲ್ಲದೆ, ಪ್ರೀತಿ ಮತ್ತು ಮದುವೆಯ ಬಗ್ಗೆಯೂ ಮಾತನಾಡಿದರು.
ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ನಿತ್ಯಾ, ಹಿರಿಯರು ಯುವಕರ ಮೇಲೆ ಮದುವೆಯನ್ನು ಒತ್ತಾಯಿಸಲು ಒಂದು ಪ್ರಾಯೋಗಿಕ ಕಾರಣವಿದೆ ಆದರೆ, ಅದಕ್ಕೆ ನೈತಿಕ ಪ್ರಾಮುಖ್ಯತೆ ನೀಡಲು ಯಾವುದೇ ಕಾರಣವಿಲ್ಲ ಎಂದರು. ಅಲ್ಲದೆ, ನಾನು ಯಾವಾಗಲೂ ಒಂಟಿಯಾಗಿರುವ ವ್ಯಕ್ತಿ. ನಾನು ನನ್ನೊಂದಿಗೆ ಯಾವಾಗಲೂ ಹೆಚ್ಚು ಸಮಯ ಕಳೆಯುತ್ತೇನೆ. ಈ ಒಂಟಿತನದ ಪರಿಕಲ್ಪನೆ ನನ್ನನ್ನು ಎಂದಿಗೂ ಬೆದರಿಸಲಿಲ್ಲ ಎಂದು ನಿತ್ಯಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಪ್ರೇಮ ಸಂಬಂಧಗಳ ಬಗ್ಗೆ ಮಾತನಾಡಿದ ನಿತ್ಯಾ, ನಾನು ಅನೇಕ ಬಾರಿ ಮೋಸ ಹೋಗಿದ್ದೇನೆ ಮತ್ತು ನನ್ನ ಪ್ರತಿಯೊಂದು ಲವ್ ಸ್ಟೋರಿಯು ಮುರಿದುಬಿದ್ದಿದೆ ಎಂದರು. ಅದಕ್ಕೆ ಕಾರಣವನ್ನೂ ನೀಡಿದ ನಿತ್ಯಾ, ಪ್ರತಿ ಬಾರಿ ನಾನು ಪ್ರೀತಿಯಲ್ಲಿ ಬಿದ್ದಾಗ ನನ್ನ ಬಾಯ್ಫ್ರೆಂಡ್ ನಾನು ಅಂದುಕೊಂಡ ರೀತಿ ಇರಲಿಲ್ಲ. ಅವರು ನನ್ನನ್ನು ಶೋಷಿಸಲು ಹೊರಟಿದ್ದಾರೆ ಅನಿಸಿತು. ಈ ವೈಯಕ್ತಿಕ ಹಿನ್ನಡೆಗಳು ಅಂತಿಮವಾಗಿ ನನ್ನನ್ನು ಅಸ್ತಿತ್ವದಲ್ಲಿಲ್ಲದ ಯಾವುದೋ ಒಂದನ್ನು ಹುಡುಕುತ್ತಿರುವುದಾಗಿ ಮನವರಿಕೆ ಮಾಡಿತು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಯಾರೊಂದಿಗಾದರೂ ಸುಂದರವಾದ ಜೀವನವನ್ನು ಹಂಚಿಕೊಳ್ಳಬೇಕೆಂದು ಕನಸು ಕಂಡಿದ್ದೆ. ಆದರೆ, ಆ ರೀತಿಯ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾನು ಮದುವೆಯನ್ನೇ ಆಗುವುದಿಲ್ಲ ಎಂದು ಹೇಳುತ್ತಿಲ್ಲ, ಯಾರಾದರೂ ನಾನು ಇಷ್ಟಪಡುವ ರೀತಿ ಇದ್ದರೆ, ನಾನು ನಾಳೆಯೇ ಮದುವೆಯಾಗಲು ಸಿದ್ಧ. ಆದರೆ, ನನ್ನ ಪ್ರಸ್ತುತ ಒಂಟಿ ಜೀವನವು ತುಂಬಾ ಸಂತೋಷವಾಗಿದೆ. ಹಾಗಾಗಿ, ನಾನು ಮದುವೆಯ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು.
ಅಂದಹಾಗೆ, ತಲೈವನ್ ತಲೈವಿ ಸಿನಿಮಾ ಹೊರತಾಗಿ ನಿತ್ಯಾ ಅವರು ‘ಇಡ್ಲಿ ಕಡೈ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಡ್ಲಿ ಕಡೈ ಧನುಷ್ ನಿರ್ದೇಶನ ಮತ್ತು ನಿರ್ಮಾಣದ ಫ್ಯಾಮಿಲಿ ಡ್ರಾಮಾ ಚಿತ್ರ. ನಿತ್ಯ ಮೆನನ್ ಮತ್ತು ಧನುಷ್ ಅವರಲ್ಲದೆ, ಇಡಲಿ ಕಡೈ ಚಿತ್ರದಲ್ಲಿ ಅರುಣ್ ವಿಜಯ್, ಶಾಲಿನಿ ಪಾಂಡೆ, ಸತ್ಯರಾಜ್, ಪಾರ್ತಿಪನ್ ಮತ್ತು ಸಮುದ್ರಕನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. 2022 ರ ‘ತಿರುಚಿತ್ರಾಂಬಲಂ’ ಚಿತ್ರದ ನಂತರ ಧನುಷ್ ಮತ್ತು ನಿತ್ಯಾ ಮೆನನ್ ಒಂದಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. (ಏಜೆನ್ಸೀಸ್)