

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್, ಕಮಲ್ ಹಾಸನ್ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆ ಮೀನಾ ವಿವಿಧ ವಿಚಾರಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಕಾಲಿವುಡ್ ನಿರ್ಮಾಪಕ ಮಾಣಿಕ್ಯಂ ನಾರಾಯಣನ್ ಆಡಿರುವ ಮಾತುಗಳು ಮೀನಾರನ್ನು ಮತ್ತೆ ಸುದ್ದಿಯಾಗುವಂತೆ ಮಾಡಿದೆ.
ಮೀನಾರನ್ನು ಕರೆದೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾಣಿಕ್ಯಂ ನಾರಾಯಣನ್ ಭಾಗವಹಿಸಿದ್ದರು. ಈ ವೇಳೆ ಮೀನಾ ಬಗ್ಗೆ ಮಾತನಾಡಿ, ಶೋ ಒಂದರ ಆತಿಥ್ಯ ವಹಿಸಲು ನಾನು ಮೀನಾ ಅವರನ್ನು ಆಹ್ವಾನಿಸಿದೆ. ಆ ಸಮಯದಲ್ಲಿ ಮೀನಾ ಮತ್ತು ಆಕೆಯ ತಾಯಿ ನನ್ನೊಂದಿಗೆ ಕೆಟ್ಟದಾಗಿ ಮಾತನಾಡಿದರು ಮತ್ತು ಸಭ್ಯವಾಗಿ ನಡೆದುಕೊಳ್ಳಲಿಲ್ಲ. ನಾನೊಬ್ಬ ನಿರ್ಮಾಪಕನಾಗಿ ಮೀನಾರ ಬಳಿ ಒಂದನ್ನು ಕೇಳಿದೆ. ಆಗ ಆಕೆಗೆ ತುಂಬಾ ಬೇಡಿಕೆ ಇತ್ತು. ಆದರೆ, ನನ್ನೊಂದಿಗೆ ಅವರು ಕೆಳಮಟ್ಟದ ಮಾತುಗಳನ್ನಾಡಿದರು. ಇದರಿಂದ ನನಗೆ ತುಂಬಾ ನೋವಾಯಿತು ಎಂದು ಮಾಣಿಕ್ಯಂ ನಾರಾಯಣನ್ ಹೇಳಿದ್ದಾರೆ.
ಈ ಘಟನೆ ಬಳಿಕ ನಾನು ಯಾರ ಬಳಿಯೂ ಏನನ್ನೂ ಕೇಳುವುದಿಲ್ಲ. ಅದೇ ರೀತಿ ಯಾವ ನಟಿಯೊಂದಿಗೂ ಮಾತನಾಡಿಲ್ಲ. ಆದರೆ ಖುಷ್ಬೂ, ರೋಜಾ ಹಾಗೂ ಸುಹಾಸಿನಿ ಮುಂತಾದವರು ನನ್ನ ಆತ್ಮೀಯ ಸ್ನೇಹಿತರು. ಇವರೆಲ್ಲ ನನ್ನ ಮಗನ ಮದುವೆಗೆ ಆಗಮಿಸಿದ್ದರು. ಈ ರೀತಿಯ ಕೆಲವೇ ಕೆಲವು ಫ್ರೆಂಡ್ಸ್ ಇದ್ದರೆ ಸಾಕು ಎಂದು ಸಂದರ್ಶನದಲ್ಲಿ ನಿರ್ಮಾಪಕ ಮಾಣಿಕ್ಯಂ ನಾರಾಯಣನ್ ಹೇಳಿದ್ದಾರೆ. ಸದ್ಯ ಈ ಸಂದರ್ಶನ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದಂತೆ ನಟಿ ಮೀನಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದಹಾಗೆ ಮೀನಾ ಅವರ ಪತಿ ವಿದ್ಯಾಸಾಗರ್ 2022, ಜೂನ್ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್ ಮಗಳಾಗಿ ನಟಿಸಿದ್ದಾಳೆ. ಮೀನಾ ಅವರು ಕೂಡ ಮತ್ತೆ ಬಣ್ಣದ ಜಗತ್ತಿನಲ್ಲಿ ಆ್ಯಕ್ಟೀವ್ ಆಗಿದ್ದಾರೆ. (ಏಜೆನ್ಸೀಸ್)