ತೆರೆಯ ಮೇಲೆ ರಾಬ್ಡಿ ದೇವಿಯಾದ ಹ್ಯೂಮಾ ಖುರೇಷಿ

Maharani - Huma Qureshi - Final
Published on

ಮುಂಬೈ: ರಜನಿಕಾಂತ್​ ಅಭಿನಯದ ಕಾಲಾ ಚಿತ್ರದ ನಂತರ ಬಾಲಿವುಡ್​ ನಟಿ ಹ್ಯೂಮಾ ಖುರೇಷಿ ಸುದ್ದಿಯೇ ಇರಲಿಲ್ಲ. ಸಂಜಯ್​ ಲೀಲಾ ಬನ್ಸಾಲಿ ಅಭಿನಯದ ಹೀರಾ ಮಂಡಿ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಇದುವರೆಗೂ ಆ ಚಿತ್ರಗಳು ಸೆಟ್ಟೇರಿಲ್ಲ. ಹಾಗಿದ್ದರೆ, ಇಷ್ಟು ದಿನ ಹ್ಯೂಮಾ ಎಲ್ಲಿದ್ದರು ಮತ್ತು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಹ್ಯೂಮಾ, ಸದ್ದಿಲ್ಲದೆ ಮಹಾರಾಣಿ ಎಂಬ ವೆಬ್​ಸೀರೀಸ್​ನಲ್ಲಿ ಕಾಣಿಸಿಕೊಂಡಿದ್ದು, ಆ ಸೀರೀಸ್​ ಮೇ 28ರಿಂದ ಸೋನಿ ಲೈವ್​ನಲ್ಲಿ ಸ್ಟ್ರೀಮ್​ ಆಗಲಿದೆ. ಈ ಸರಣಿಯಲ್ಲಿ ಅವರು ಅನಕ್ಷರಸ್ಥ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರಂತೆ. ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರನ್ನು ಆಧರಿಸಿ, ಈ ಪಾತ್ರ ಡಿಸೈನ್​ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವೆಬ್​ಸರಣಿಯಲ್ಲಿ ತಮ್ಮದು ರಾಣಿ ಭಾರತಿ ಎಂಬ ಪಾತ್ರ ಎಂದು ಹೇಳಿಕೊಂಡಿರುವ ಹ್ಯೂಮಾ, ತಮ್ಮ ಚಿತ್ರಜೀವನದಲ್ಲೇ ಇಂಥದ್ದೊಂದು ವಿಭಿನ್ನವಾದ ಪಾತ್ರವನ್ನು ಇದುವರೆಗೂ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಕೆ ಒಬ್ಬ ಸಾಮಾನ್ಯ ಹೆಣ್ಣು. ಮನೆ ಬಿಟ್ಟು ಇನ್ನೊಂದು ಪ್ರಪಂಚ ಆಕೆಗೆ ಗೊತ್ತಿಲ್ಲ. ಗಂಡ-ಮಕ್ಕಳ ಕಷ್ಟಸುಖಗಳೇ ತನ್ನದೆಂದುಕೊಂಡಿರುವ ಆಕೆ, ಅದೊಂದು ದಿನ ಮನೆ ಬಿಟ್ಟು ರಾಜಕೀಯ ಸೇರಬೇಕಾಗುತ್ತದೆ. ತನ್ನ ಗಂಡನ ಒಂದು ನಿರ್ಧಾರದಿಂದ, ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲದವಳು ಆ ರಾಜ್ಯದ ಮುಖ್ಯಮಂತ್ರಿಯಾಗುತ್ತಾಳೆ. ಆ ನಂತರ ಆಕೆ ಏನೆಲ್ಲ ಅನುಭವಿಸಬೇಕಾಗುತ್ತದೆ ಎಂಬುದೇ ಈ ವೆಬ್​ಸರಣಿಯ ಕಥೆ ಎಂದು ಹೇಳಿಕೊಂಡಿದ್ದಾರೆ ಹ್ಯೂಮಾ ಖುರೇಷಿ.

ಸುಭಾಷ್​ ಕಪೂರ್​ ನಿರ್ದೇಶಿಸಿರುವ ಈ ವೆಬ್​ಸರಣಿಯಲ್ಲಿ ಹ್ಯೂಮಾ ಜತೆಗೆ ಸೋಹಮ್​ ಷಾ, ಅಮಿತ್​ ಸಯಾಲ್​, ವಿನೀತ್​ ಕುಮಾರ್​ ಮುಂತಾದವರು ಮಹಾರಾಣಿಯಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net