

ಸಹಜವಾಗಿ ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಹಾಗೆಯೇ ಮೊನ್ನೆಯಷ್ಟೇ ಬಾಲಿವುಡ್ ನಟ ಹೃತಿಕ್ ರೋಷನ್ ಮಕ್ಕಳೊಂದಿಗೆ ಬಾಲ್ಕನಿಯಲ್ಲಿ ಕಾಲಕಳೆಯುತ್ತಿದ್ದ ಫೋಟೋವೊಂದನ್ನು ಪತ್ನಿ ಸುಸ್ಸನೇ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಹಾಗೆ ಹಂಚಿಕೊಂಡ ಫೋಟೋ ವೈರಲ್ ಆಗಿದೆ.
ಹೌದು, ಆ ಫೋಟೋದಲ್ಲಿ ಹೃತಿಕ್ ಸಿಗರೇಟ್ ಹಿಡಿದಿರುವ ರೀತಿ ಕಾಣಿಸಿದೆ. ಅದನ್ನು ಗಮನಿಸಿದ ಟ್ವಿಟರ್ ಬಳಕೆದಾರನೊಬ್ಬ ‘ನೀವು ಮಕ್ಕಳೊಂದಿಗೆ ನಿಂತು ಸಿಗರೇಟ್ ಸೇದುತ್ತೀರಾ? ಅಥವಾ ಕೈಯಲ್ಲಿರುವುದು ಸಿಗರೇಟಾ ಇಲ್ಲವೇ ನಾನೇ ಹಾಗೇ ತಿಳಿದುಕೊಂಡೆನಾ? ನನ್ನಿಂದ ಏನಾದರೂ ತಪ್ಪಾದ್ರೆ ಕ್ಷಮಿಸಿ ’ ಎಂದು ಹೃತಿಕ್ ಕಡೆ ಪ್ರಶ್ನೆ ಎಸೆದಿದ್ದರು. ಅದಕ್ಕೆ ಹೃತಿಕ್ ಪ್ರತಿಕ್ರಿಯಿಸಿದ್ದಾರೆ.
‘ನಾನು ಸಿಗರೇಟ್ ಸೇದುವುದಿಲ್ಲ. ಒಂದು ವೇಳೆ ನಾನು ಕ್ರಿಶ್ ಆಗಿದ್ದರೆ, ಈ ಕರೊನಾ ವೃರಸ್ ಅನ್ನು ನಿರ್ಮೂಲನೆ ಮಾಡಿ, ಅದಾದ ಬಳಿಕ ಮಾಡುವ ಮೊದಲ ಕೆಲಸ ಏನೆಂದರೆ, ಈ ಜಗತ್ತಿನಿಂದಲೇ ಸಿಗರೇಟ್ ಅನ್ನು ಕಿತ್ತೇಸೆಯುತ್ತಿದ್ದೆ’ ಎಂದಿದ್ದಾರೆ.
ಸದ್ಯ ಹೃತಿಕ್ ಅವರ ಈ ಮಾತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಜುಹೂ ಪ್ರದೇಶದ ಮನೆಯಲ್ಲಿ ಮಡದಿ ಮಕ್ಕಳೊಂದಿಗೆ ಹೃತಿಕ್ ಲಾಕ್ಡೌನ್ ಕಾಲ ಕಳೆಯುತ್ತಿದ್ದಾರೆ. (ಏಜೆನ್ಸೀಸ್)