'ಐರಾವತ' ಬೆಡಗಿ ಏಳು ಕೋಟಿ ಸಂಭಾವನೆ ತಗೊಳ್ತಾರಾ?

Urvashi Rautela - Final
Published on

ಯಾವುದೇ ಚಿತ್ರರಂಗವಿರಲಿ, ಹೀರೋಗಳಿಗೆ ಹೋಲಿಸಿದರೆ ಹೀರೋಯಿನ್​ಗಳಿಗೆ ಸಂಭಾವನೆ ಕಡಿಮೆಯೇ. ಆದರೂ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್​, ಪ್ರಿಯಾಂಕಾ ಚೋಪ್ರಾ ಮುಂತಾದವರು 15ರಿಂದ 20 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಈಗ್ಯಾಕೆ ಈ ಪ್ರಶ್ನೆ ಎಂದರೆ, ದರ್ಶನ್​ ಅಭಿನಯದ 'ಐರಾವತ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಊರ್ವಶಿ ರೌತೇಲ ಅವರ ಸಂಭಾವನೆ ಏಳು ಕೋಟಿಗೆ ಏರಿದೆ ಎಂಬಂತಹ ಸುದ್ದಿಗಳು ಬಾಲಿವುಡ್​ನಲ್ಲಿ ಓಡಾಡುತ್ತಿದೆ.

ಊರ್ವಶಿ ಅಭಿನಯದ 'ವರ್ಜಿನ್​ ಭಾನುಪ್ರಿಯಾ' ಎಂಬ ಚಿತ್ರವು ಇತ್ತೀಚೆಗೆ ಜೀ5ನಲ್ಲಿ ಪ್ರೀಮಿಯರ್​ ಆಗಿದೆ. ಅಜಯ್​ ಲೋಹಾನ್​ ನಿರ್ದೇಶನದ ಈ ಚಿತ್ರಕ್ಕೆ ಊವರ್ಶಿ ರೌತೇಲ, ಏಳು ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಜಕ್ಕೂ ಊರ್ವಶಿ ರೌತೇಲಗೆ ಅಷ್ಟೊಂದು ಸಂಭಾವನೆಯನ್ನು ಕೊಡುವುದು ಹೌದಾ ಎಂಬ ಪ್ರಶ್ನೆಯೊಂದು ಬಾಲಿವುಡ್​ನಲ್ಲಿ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಇದೊಂದು ಫೇಕ್​ ನ್ಯೂಸ್​ ಎಂದು ಸಹ ಹೇಳಲಾಗುತ್ತಿದೆ.

ಬಾಲಿವುಡ್​ ಪಂಡಿತರ ಪ್ರಕಾರ, 'ಊರ್ವಶಿಗೆ ಏಳು ಕೋಟಿ ಕೊಟ್ಟರೆ ಅದರಿಂದ ಚಿತ್ರಕ್ಕೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ. ಅಷ್ಟೊಂದು ದೊಡ್ಡ ದುಡ್ಡಿನಲ್ಲಿ ಒಂದು ಚಿತ್ರವನ್ನೇ ತೆಗೆಯಬಹುದು. ನಿಜ ಹೇಳಬೇಕೆಂದರೆ, ಆಕೆಯ ಸಂಭಾವನೆ ಅಷ್ಟೊಂದಿಲ್ಲ' ಎಂದು ಹೇಳುತ್ತಾರೆ.

ಇನ್ನು ಕೆಲವರ ಪ್ರಕಾರ ಇದೊಂದು ಗಿಮಿಕ್​ ಅಂತೆ. ಏಳು ಕೋಟಿ ಸಂಭಾವನೆ ಎಂದರೆ, ಸಹಜವಾಗಿಯೇ ಅವರಿಗೆ ದೊಡ್ಡ ಮಾರ್ಕೆಟ್​ ಇದೆ ಎಂದು ಸುದ್ದಿಯಾಗುತ್ತದೆ. ಚಿತ್ರಕ್ಕೆ ಊರ್ವಶಿಯೇ ಬೇಕು ಎನ್ನುವವರು ಅದಕ್ಕಿಂತ ಹೆಚ್ಚು ಹಣ ಸಹ ಕೊಡಬಹುದು, ಇಲ್ಲವಾದರೆ ಅಷ್ಟಾದರೂ ಕೊಡಬಹುದು. ಹಾಗಾಗಿ ಈ ರೀತಿಯ ಸುಳ್ಳು ಸುದ್ದಿ ಮಾಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಾಗಾದರೆ, ಊರ್ವಶಿ ರೌತೇಲ ಅವರ ನಿಜವಾದ ಸಂಭಾವನೆ ಎಷ್ಟು? ಹುಡುಗಿಯರ ವಯಸ್ಸಷ್ಟೇ ಅಲ್ಲ, ಸಂಭಾವನೆಯನ್ನೂ ಕೇಳಬಾರದು ಎಂಬುದು ಗೊತ್ತಿರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net