

ಬೆಂಗಳೂರು: ನಾಗಣ್ಣ ನಿರ್ದೇಶನದ, ಬಹುತಾರಾಗಣದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಇತ್ತೀಚೆಗಷ್ಟೇ ಶಿವರಾತ್ರಿ ಪ್ರಯುಕ್ತ ಅದ್ದೂರಿ ಶತದಿನೋತ್ಸವ ಆಚರಿಸಿಕೊಂಡಿತ್ತು. ಇದೇ ‘..ಕುರುಕ್ಷೇತ್ರ’ ಚಿತ್ರದ ಮೂಲಕ ಕನ್ನಡಕ್ಕೆ ನವನಟಿಯ ಆಗಮನವೂ ಆಗಿತ್ತು. ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿಗೆ ಜೋಡಿಯಾಗಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದ ಅದಿತಿ ಆರ್ಯ ಉತ್ತರೆಯ ಪಾತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು. ಈಗ ಇದೇ ಅದಿತಿ, ‘83’ರ ಗುಂಗಲ್ಲಿದ್ದಾರೆ. ಅಂದರೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ‘83’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಅದಿತಿ ಆರ್ಯ ನಿಭಾಯಿಸಿದ್ದಾರೆ.
ವಿಶೇಷ ಏನೆಂದರೆ ಇದು ಅದಿತಿಯ ಮೊದಲ ಬಾಲಿವುಡ್ ಸಿನಿಮಾ. 2015ರಲ್ಲಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದ ಅದಿತಿ, ಅದಾದ ಬಳಿಕ ತೆಲುಗಿನ ‘ಇಜಂ’ ಚಿತ್ರದ ಮೂಲಕ ನಂದಮೂರಿ ಕಲ್ಯಾಣ್ ರಾಮ್ ಜತೆ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದರು. ಹಿಂದಿಯಲ್ಲಿ ‘ತಂತ್ರ’, ‘ಸ್ಪಾಟ್ಲೈಟ್ 2’ ಎಂಬ ಎರಡು ವೆಬ್ಸಿರೀಸ್ಗಳಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದರು. ತೆಲುಗಿನಲ್ಲಿ ‘ಸೆವೆನ್’ ಶೀರ್ಷಿಕೆಯ ಸಿನಿಮಾ ಮಾಡಿ, ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದರು. ಪ್ರಸ್ತುತ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ರವಿಚಂದ್ರ’ ಚಿತ್ರದಲ್ಲಿ ಉಪೇಂದ್ರಗೆ ಅದಿತಿ ಜೋಡಿಯಾಗಿದ್ದಾರೆ.
ಆದರೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ ನಾಲ್ಕು ವರ್ಷ ಕಳೆದರೂ ಒಂದೇ ಒಂದು ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಅದಿತಿಗೆ ಸಿಕ್ಕಿರಲಿಲ್ಲ. ಈಗ ಅದು ‘83’ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಪತ್ನಿ ಇಂದ್ರಜಿತ್ ಅಮರ್ನಾಥ್ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ.