

‘ನನಗೆ ಈ ವಿಷಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಅನುಭವಗಳಾಗಿವೆ. ‘ಹೋಪ್’ ಅಂದರೆ ಈ ತರಹದ ಚಿತ್ರ ಎಂದು ಗೊತ್ತಿರಲಿಲ್ಲ. ಈಗ ಗೊತ್ತಾಯಿತು. ಈ ಚಿತ್ರದ ಮೂಲಕ ಜಾಗೃತಿ ಬರಲಿ ...’ ಎಂದರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ.
‘ಹೋಪ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ವರ್ಗಾವಣೆ ಕುರಿತು ಬೆಳಕು ಚೆಲ್ಲುವ ಅವಶ್ಯಕತೆ ಇದೆ. ಹಣ, ಜಾತಿ, ವಶೀಲಿ ಹೀಗೆ ಯಾವ್ಯಾವ ಕಾರಣಕ್ಕೆ ವರ್ಗಾವಣೆಗಳಾಗುತ್ತವೆ ಹೇಳೋದು ಕಷ್ಟ. ಕೆಟ್ಟ ಕಾರಣಗಳ ಜತೆಗೆ ಒಳ್ಳೆಯ ಕಾರಣಗಳಿಗೂ ವರ್ಗಾವಣೆಗಳು ಆಗುತ್ತವೆ. ಈ ಬಗ್ಗೆ ಸಿನಿಮಾದಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ವಿಷಯ’ ಎಂದರು.
ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದು ಅಂಬರೀಷ್, ‘ವರ್ಗಾವಣೆ ವಿಷಯದಲ್ಲಿ ಕೆಲವು ನೀತಿ-ನಿಯಮಗಳಿವೆ. ಆದರೆ, ಅದನ್ನು ಗಾಳಿಗೆ ತೂರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸುವ ಅಧಿಕಾರ ಪ್ರತೀ ಅಧಿಕಾರಿಗೂ ಇದೆ’ ಎನ್ನುತ್ತಾರೆ. ಬಿಲಿಯರ್ಡ್ಸ್ ಆಟಗಾರ್ತಿ ವರ್ಷಾ ಕಥೆ ಬರೆದು ನಿರ್ವಿುಸಿರುವ ಈ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್, ಪ್ರಕಾಶ್ ಬೆಳವಾಡಿ, ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಕೃಷ್ಣ ದೇಶಪಾಂಡೆ, ಸಿರಿ ಮುಂತಾದವರು ನಟಿಸಿದ್ದಾರೆ.