'ಹೊಂದಿಸಿ ಬರೆಯಿರಿ’ ಚಿತ್ರದ ಬಿಡುಗಡೆ ಮುಂದೂಡಿಕೆ ... ಹೊಸ ದಿನಾಂಕ ಸದ್ಯದಲ್ಲೇ ಘೋಷಣೆ

Hondisi Bareyiri
Published on

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ಹೊಂದಿಸಿ ಬರೆಯಿರಿ' ಚಿತ್ರವು ನವೆಂಬರ್​ 18ರಂದು ಬಿಡುಗಡೆಯಾಗಬೇಕಿತ್ತು. ಈಗ ಚಿತ್ರತಂಡ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಆದರೆ, ಸಿನಿಮಾದ ಕೊನೆಯ ಹಂತದ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಈಗಾಗಲೇ ಬಿಡುಗಡೆಯಾಗಿರುವ 'ಹೊಂದಿಸಿ ಬರೆಯಿರಿ' ಚಿತ್ರದ ಎರಡು ಹಾಡುಗಳು ಕೇಳುಗರ ಮನ ಗೆದ್ದಿದೆ, ಇದೀಗ ಚಿತ್ರದ ಇನ್ನೊಂದು ಹೊಸ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ತಲೆಹರಟೆ ಮಾಡುತ್ತಿದೆ ಈ ಹೃದಯ’ ಎಂದು ಸಾಗುವ ಈ ಪೆಪ್ಪಿ ಹಾಡನ್ನು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರೇ ರಚಿಸಿದ್ದು, ಜೋ ಕೋಸ್ಟ ಸಂಗೀತ ಸಂಯೋಜಿಸಿದ್ದರೆ. ಐಶ್ವರ್ಯ ರಂಗರಾಜನ್ ಹಾಗೂ ವರುಣ್ ರಾಮಚಂದ್ರ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗಬೇಕು ಎನ್ನುವ ಒನ್​ಲೈನ್​ ಇರುವ ಈ ಚಿತ್ರವು ಐವರು ಸ್ನೇಹಿತರ ಬದುಕಿನ ಚಿತ್ರಣವಾಗಿದೆ. ಒಬ್ಬೊಬ್ಬರದ್ದು ಒಂದೊಂದು ಚಿತ್ರಣವಿದ್ದು, ಅವರ ಭಾವನಾತ್ಮಕ ಪ್ರಯಾಣವನ್ನು ತೋರಿಸಲಾಗಿದೆಯಂತೆ.

ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ನಿರ್ಮಾಣ ಮಾಡಿರುವ 'ಹೊಂದಿಸಿ ಬರೆಯಿರಿ' ಚಿತ್ರಕ್ಕೆ ಜೋ ಕೋಸ್ಟ ಸಂಗೀತ ಮತ್ತು ಶಾಂತಿ ಸಾಗರ್ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net