ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ಹೂಡಿಕೆ; ಹೊಂಬಾಳೆ ಫಿಲಂಸ್​ ಹೊಸ ಹೆಜ್ಜೆ …

Hombale - Vijay Kumar Kiragandur
Published on

ಮುಂಬೈ: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್​, ಈಗಾಗಲೇ ದಕ್ಷಿಣದ ನಾಲ್ಕೂ ಭಾಷೆಗಳ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಒಟ್ಟಾರೆ ಮೂರು ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಸಂಸ್ಥೆಯ ಪರವಾಗಿ ನಿರ್ಮಾಪಕ ವಿಜಯ್​ ಕಿರಗಂದೂರು ಹೇಳಿದ್ದಾರೆ.

ಇತ್ತೀಚಿಗೆ ಮುಂಬೈನಲ್ಲಿ ಸಂವಾದವೊಂದರಲ್ಲಿ ಮಾತನಾಡಿರುವ ಅವರು, 'ಭಾರತದಲ್ಲಿ ಮನರಂಜನಾ ಉದ್ಯಮವು ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವೈಭವದ ದಿನಗಳನ್ನು ಕಾಣಬಹುದಾಗಿದೆ. ಹೊಂಬಾಳೆ ಫಿಲಂಸ್​ ಈಗಾಗಲೇ ಬೇರೆ ಭಾಷೆಗಳಲ್ಲಿ ಹಲವು ಚಿತ್ರಗಳನ್ನು ನಿರ್ಮಿಸುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಮೂರು ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ' ಎಂದಿದ್ದಾರೆ.

ಯಾವ ತರಹದ ಚಿತ್ರಗಳನ್ನು ಹೊಂಬಾಳೆ ಸಂಸ್ಥೆಯಿಂದ ನಿರ್ಮಿಸಬಹುದು ಎಂಬ ಪ್ರಶ್ನೆಗೆ, 'ಇಂಥ ನಿರ್ಧಿಷ್ಟ ಜಾನರ್​ನ ಸಿನಿಮಾ ಆಗಿರುವುದಿಲ್ಲ. ಎಲ್ಲ ತರಹದ ಕಥೆಗಳನ್ನೂ ತೆರೆಗೆ ತರುವ ಯೋಚನೆ ಇದೆ. ಪ್ರತೀ ವರ್ಷ ಸಣ್ಣ ಚಿತ್ರಗಳ ಜತೆಗೆ ಒಂದು ಬೃಹತ್​ ಚಿತ್ರವನ್ನು ನಿರ್ಮಿಸುವ ಯೋಚನೆ ಇದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳನ್ನು ನಿರ್ಮಿಸುವ ಮೂಲಕ ದೊಡ್ಡ ಆಡಿಯನ್ಸ್​ ತಲುಪುವ ಯೋಚನೆ ಇದೆ' ಎಂದು ಹೇಳಿದ್ದಾರೆ.

ನಮ್ಮ ಚಿತ್ರಗಳನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಬೇಕು, ಬೇರೆ ದೇಶಗಳ ಜನ ಸಹ ನೋಡಬೇಕು ಎಂಬುದು ನಮ್ಮ ಆಸೆ. ನಮ್ಮ ಮುಂದಿನ ತಲೆಮಾರಿನವರಿಗೆ ಚಿತ್ರಗಳ ಮೂಲಕ ನಮ್ಮ ಸಂಸ್ಕೃತಿಯನ್ನು ತಲುಪಿಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವು ಬೇರೆಬೇರೆ ಭಾಷೆಗಳ ಕಥೆಗಾರರು ಮತ್ತು ಬರಹಗಾರರೊಂದಿಗೆ ಕೈಜೋಡಿಸುತ್ತಿದ್ದೇವೆ. ಕಥೆಗಳು ಸಿದ್ಧವಾದ ನಂತರ ಅದನ್ನು ತೆರೆಗೆ ತರುವ ಸೂಕ್ತ ನಿರ್ದೇಶಕರು ಮತ್ತು ಕಲಾವಿರ ಬಗ್ಗೆ ಮಗನ ಹರಿಸುತ್ತೇವೆ. ನಮ್ಮ ಮೊದಲ ಆದ್ಯತೆ ಕಥೆಗಾರರು. ಏಕೆಂದರೆ, ಅವರಲ್ಲವೇ ಕಥೆಗಳನ್ನು ಸೃಷ್ಟಿಸುವವರು' ಎನ್ನುತ್ತಾರೆ ವಿಜಯ್​ ಕಿರಗಂದೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net