

ಬೆಂಗಳೂರು: ಸುಧೀರ್ ಅತ್ತಾವರ್ ನಿರ್ದೇಶಿಸುತ್ತಿರುವ 'ಕೊರಗಜ್ಜ' ಜೀವನಾಧಾರಿತ ಚಿತ್ರಕ್ಕೆ ಮೂರನೇ ಬಾರಿಗೆ ಕೈಮ್ಯಾಕ್ಸ್ ಚಿತ್ರೀಕರಿಸಲಾಗಿದೆ. ಗಗನಚುಕ್ಕಿ ಜಲಪಾತದ ಮೇಲಿನಿಂದ ನೀರು ಧುಮುಕವ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಕೈಮ್ಯಾಕ್ಸ್ ರೀ ಶೂಟ್ ಮಾಡಲಾಗಿದೆ.
ಈ ಸಮಯದಲ್ಲಿ 'ಆ್ಯಂಟ್ ಮ್ಯಾನ್', 'ಟೂ ಸ್ಪಿರಿಟ್', 'ಆಕ್ವಮ್ಯಾನ್' ಸೇರಿ ಹಲವು ಹಾಲಿವುಡ್ ಚಿತ್ರಗಳ ವಿಎಫ್‌ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಮಾಡಿರುವ ತಂತ್ರಜ್ಞರು ಭಾಗಿಯಾಗಿದ್ದರು. ಲೊಕೇಷನ್‌ನಲ್ಲಿ ಚಿತ್ರೀಕರಣ ಮಾಡಿದ ಬಳಿಕ 'ಕೊರಗಜ್ಜ' ಚಿತ್ರತಂಡ ಸ್ಟುಡಿಯೋ 9ರಲ್ಲಿ ಸತತ ಐದು ದಿನಗಳ ಕಾಲ ಹಿರಿಯ ನಟಿ ಶ್ರುತಿ, ನಾಯಕ ಭರತ್ ಸೂರ್ಯ ಮತ್ತು ರಂಗಭೂಮಿ ಕಲಾವಿದ ಡುಂಡಿ ಸೇರಿದಂತೆ ಹಲವರು ಗ್ರೀನ್ ಮ್ಯಾಟ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.
ಶ್ರುತಿ ಅವರಿಲ್ಲಿ ಕೊರಗಜ್ಜನ ಸಾಕುತಾಯಿ ಬೈರಕ್ಕ ಬೈಕಡ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ತ್ರಿವಿಕ್ರಮ ಸಾಫಲ್ಯ ಈ ಸಿನಿಮಾ ನಿರ್ಮಿಸುತ್ತಿದ್ದು ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಚಿತ್ರಕ್ಕೆ ಸುರೇಶ್ ಅರಸ್ ವಿದ್ಯಾಧರ್ ಶೆಟ್ಟಿ ಸಂಕಲನ, ಸುಧೀರ್ ಕೃಷ್ಣ ಸಂಗೀತ, ಪವನ್ ಕುಮಾರ್ ಛಾಯಾಗ್ರಹಣವಿರಲಿದೆ. ಕಬೀರ್ ಬೇಡಿ, ಭವ್ಯ, ಸಂದೀಪ್ ಸೊಪರ್ಕ, ನವೀನ್ ಪಡೀಲ್ ಪ್ರಮುಖ ತಾರಾಗಣದಲ್ಲಿದ್ದಾರೆ.