ಹಾಲಿವುಡ್‌ನಲ್ಲಿ ಸೂತಕದ ಛಾಯೆ: ಜುರಾಸಿಕ್ ಪಾರ್ಕ್ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ...! Jurassic Park Star Sam Neill

ಹಾಲಿವುಡ್‌ನಲ್ಲಿ ಸೂತಕದ ಛಾಯೆ: ಜುರಾಸಿಕ್ ಪಾರ್ಕ್ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ...! Jurassic Park Star Sam Neill
ಹಾಲಿವುಡ್‌ನಲ್ಲಿ ಸೂತಕದ ಛಾಯೆ: ಜುರಾಸಿಕ್ ಪಾರ್ಕ್ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ...! Jurassic Park Star Sam Neill
Published on

ಪ್ರಮುಖ ಮುಖ್ಯಾಂಶಗಳು

  • ಜುರಾಸಿಕ್ ಪಾರ್ಕ್ ಖ್ಯಾತಿಯ ಹಿರಿಯ ಹಾಲಿವುಡ್ ನಟ ಸ್ಯಾಮ್ ನೀಲ್ ವಿಧಿವಶ
  • ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎಪ್ಪತ್ತೆಂಟನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ದಿಗ್ಗಜ ನಟ ಸ್ಯಾಮ್ ನೀಲ್
  • ಸ್ಯಾಮ್ ನೀಲ್ ನಿಧನದ ಸುದ್ದಿ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಕುಟುಂಬಸ್ಥರು
  • ಕ್ಯಾನ್ಸರ್ ಮುಕ್ತರಾಗಿದ್ದರೂ ಹಠಾತ್ ಆಗಿ ಬದುಕಿಗೆ ವಿದಾಯ ಹೇಳಿದ ನಟ ಸ್ಯಾಮ್ ನೀಲ್
  • ಜಾಗತಿಕ ಮನ್ನಣೆ ಗಳಿಸಿದ್ದ ನ್ಯೂಜಿಲೆಂಡ್ ಮೂಲದ ನಟ ಸ್ಯಾಮ್ ನೀಲ್ ಅಗಲಿಕೆಗೆ ಅಭಿಮಾನಿಗಳ ಕಂಬನಿ
Jurassic Park Star Sam Neill : ವಿಶ್ವಪ್ರಸಿದ್ಧ ಜುರಾಸಿಕ್ ಪಾರ್ಕ್ ಸಿನಿಮಾದ ಡಾ. ಅಲಾನ್ ಗ್ರಾಂಟ್ ಪಾತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಸ್ಯಾಮ್ ನೀಲ್ (78) ಅವರು ಕೊನೆಯುಸಿರೆಳೆದಿದ್ದಾರೆ.
ಹಾಲಿವುಡ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ದಿಗ್ಗಜ ನಟ ಸ್ಯಾಮ್​ ನೀಲ್​ ಅವರ ಅಗಲಿಕೆಯಿಂದಾಗಿ ಜಾಗತಿಕ ಚಿತ್ರರಂಗದಲ್ಲಿ ಸೂತಕದ ಛಾಯೆ ಆವರಿಸಿದೆ. ಸ್ಯಾಮ್​ ಅವರ ನಿಧನದ ಸುದ್ದಿಯನ್ನು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕವೇ ಹಂಚಿಕೊಳ್ಳಲಾಗಿದ್ದು, ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆ ಮೂಲಕ ತೀವ್ರ ಕಂಬನಿ ಮಿಡಿಯುತ್ತಿದ್ದಾರೆ.
ಸ್ಯಾಮ್​ ಅವರ ಅಧಿಕೃತ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಸ್ಯಾಮ್ ನೀಲ್ ಅವರ ಕುಟುಂಬಸ್ಥರು ಅತ್ಯಂತ ದುಃಖದೊಂದಿಗೆ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೋಮವಾರ (ಜುಲೈ 13) ಸ್ಯಾಮ್ ಕೊನೆಯುಸಿರೆಳೆದಿದ್ದಾರೆ. ಸ್ಯಾಮ್ ಅವರ ಕೊನೆಯ ಕ್ಷಣಗಳಲ್ಲಿ ಕುಟುಂಬಸ್ಥರು ಅವರ ಜೊತೆಗಿದ್ದರು. ತಮ್ಮ ಇಡೀ ಜೀವನವನ್ನು ಗೌರವಯುತವಾಗಿ ನಡೆಸಿದ ಸ್ಯಾಮ್, ಕೊನೆಯ ಕ್ಷಣದಲ್ಲೂ ಅದೇ ಘನತೆಯೊಂದಿಗೆ ಬದುಕಿಗೆ ವಿದಾಯ ಹೇಳಿದ್ದಾರೆ ಎಂದು ಬರೆಯಲಾಗಿದೆ.
ಈ ಸಾವು ಅತ್ಯಂತ ಹಠಾತ್ ಹಾಗೂ ಅನಿರೀಕ್ಷಿತವಾಗಿ ಸಂಭವಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಮ್, ಕೊನೆಯ ದಿನಗಳಲ್ಲಿ ಕ್ಯಾನ್ಸರ್ ಮುಕ್ತರಾಗಿದ್ದರು ಎಂಬುದು ಕುಟುಂಬಕ್ಕೆ ಸಮಾಧಾನ ತಂದಿತ್ತು. ಅಲ್ಲದೆ, ಕೊನೆಯ ದಿನಗಳಲ್ಲಿ ಸ್ಯಾಮ್ ನೀಲ್ ಅವರಿಗೆ ಅದ್ಭುತವಾದ ಆರೈಕೆ ಮತ್ತು ಚಿಕಿತ್ಸೆ ನೀಡಿದ ಸಿಡ್ನಿಯ 'ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆ'ಯ ಸಿಬ್ಬಂದಿಗೆ ನಟನ ಕುಟುಂಬವು ಈ ಸಂದರ್ಭದಲ್ಲಿ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.
ಸದ್ಯಕ್ಕೆ ಕುಟುಂಬವು ತೀವ್ರ ಆಘಾತ ಮತ್ತು ಅಪಾರ ನಷ್ಟದ ದುಃಖದಲ್ಲಿದ್ದು, ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಅಲ್ಲಿಯವರೆಗೆ ಕುಟುಂಬದ ಖಾಸಗಿತನವನ್ನು ಗೌರವಿಸಬೇಕು ಮತ್ತು ದುಃಖವನ್ನು ಭರಿಸುವ ಶಕ್ತಿ ನೀಡಬೇಕೆಂದು ಕುಟುಂಬದ ಪರವಾಗಿ ಅಭಿಮಾನಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲಾಗಿದೆ.
ನ್ಯೂಜಿಲೆಂಡ್ ಮೂಲದವರಾದ ಸ್ಯಾಮ್ ನೀಲ್ ಅವರು ಹಲವಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಯಶಸ್ವಿ ವೃತ್ತಿಜೀವನವನ್ನು ಮುನ್ನಡೆಸಿದ್ದರು. 'ಜುರಾಸಿಕ್ ಪಾರ್ಕ್' ಮಾತ್ರವಲ್ಲದೆ 'ದಿ ಪಿಯಾನೋ', 'ಡೆಡ್ ಕಾಮ್' ಮತ್ತು 'ಇನ್ ದಿ ಮೌತ್ ಆಫ್ ಮ್ಯಾಡ್ನೆಸ್' ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿನ ಅವರ ನಟನೆ ಸದಾ ಸ್ಮರಣೀಯ. ಸಿನಿಮಾ ಮತ್ತು ದೂರದರ್ಶನ ಕ್ಷೇತ್ರ ಎರಡರಲ್ಲೂ ಅದ್ಭುತ ಅಭಿನಯ ನೀಡುವ ಮೂಲಕ ಅವರು ಜಾಗತಿಕ ಮನ್ನಣೆ ಗಳಿಸಿದ್ದರು. ಅವರ ಅಗಲಿಗೆ ಇಂದು ಹಾಲಿವುಡ್​ಗೆ ತುಂಬಲಾರದ ನಷ್ಟವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net