ನಾಯಕಿಯರ ದರ್ಬಾರ್; ಹೆಣ್ಮಕ್ಕಳೇ ಸ್ಟ್ರಾಂಗು ಗುರು...

Cinivani
Published on

ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಹರಿಪ್ರಿಯಾ ಮತ್ತು ರಚಿತಾ ರಾಮ್ ಅಭಿನಯದ ತಲಾ ನಾಲ್ಕು ಚಿತ್ರಗಳಾದರೂ ಬಿಡುಗಡೆಯಾಗಬೇಕಿತ್ತು. ಇನ್ನು ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ಸಂಜನಾ ಆನಂದ್ ಮುಂತಾದವರ ಮೂರು ಚಿತ್ರಗಳಾದರೂ ಈ ವರ್ಷ ತೆರೆಕಾಣಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಅವೆಲ್ಲ ಚಿತ್ರಗಳೂ ಮುಂದಿನ ವರ್ಷಕ್ಕೆ ಹೋಗಿವೆ. ಅವರೆಲ್ಲರ ಖಾತೆಗಳಲ್ಲಿ ಈಗಾಗಲೇ ತಯಾರಾಗಿ ಬಿಡುಗಡೆ ಆಗಬೇಕಿರುವ ಚಿತ್ರಗಳು ಮತ್ತು ಹೊಸದಾಗಿ ಒಪ್ಪಿರುವ ಸಿನಿಮಾಗಳನ್ನು ಲೆಕ್ಕ ಹಾಕಿದರೆ, ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅಂತನಿಸದಿದ್ದರೆ ಕೇಳಿ.

ಬೆಂಗಳೂರು: ಈ ವರ್ಷ ಹರಿಪ್ರಿಯಾ ಮತ್ತು ರಚಿತಾ ರಾಮ್ ನಡುವೆ ಯಾರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಏಕೆಂದರೆ, ಕಳೆದ ವರ್ಷ ಹರಿಪ್ರಿಯಾ ಮತ್ತು ರಚಿತಾ ರಾಮ್ ಅಭಿನಯದ ತಲಾ ಏಳು ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನು ಈ ವರ್ಷದಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಗಳ ಪಟ್ಟಿಯೂ ದೊಡ್ಡದಿತ್ತು. ಹಾಗಾಗಿ ಇಬ್ಬರಲ್ಲಿ ಯಾರ ಅಭಿನಯದ ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಎಲ್ಲರೂ ಕಾಯುತ್ತಿದ್ದರಾದರೂ, ಅದಕ್ಕೆ ಲಾಕ್​ಡೌನ್ ಬ್ರೇಕ್ ಹಾಕಿದೆ. ಹರಿಪ್ರಿಯಾ ಅಭಿನಯದ ‘ಬಿಚ್ಚುಗತ್ತಿ’ ಈ ವರ್ಷ ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಇನ್ನು ರಚಿತಾ ರಾಮ್ ಖಾತೆ ತೆರೆಯುವುದಕ್ಕೆ ಮುಂಚೆಯೇ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಅವರ ಅಭಿನಯದ ಯಾವ ಚಿತ್ರ ಸಹ ಬಿಡುಗಡೆಯಾಗಿಲ್ಲ. ಈಗ ಆ ಕುತೂಹಲ ಮುಂದಿನ ವರ್ಷಕ್ಕೆ ಶಿಫ್ಟ್ ಆಗಿದೆ.

ಮುಂದಿನ ವರ್ಷ ಸಹ ಯಾವ ನಟಿಯ ಹೆಚ್ಚು ಚಿತ್ರಗಳು ಬಿಡುಗಡೆಯಾಗಬಹುದು ಎಂಬ ಕುತೂಹಲ ಈಗಲೇ ಶುರುವಾಗಿದೆ. ಈ ಬಾರಿ ಹರಿಪ್ರಿಯಾ ಮತ್ತು ರಚಿತಾ ಜತೆಗೆ ಇನ್ನಷ್ಟು ನಟಿಯರು ಸೇರಿಕೊಂಡಿದ್ದಾರೆ. ಪ್ರಮುಖವಾಗಿ ಪ್ರಿಯಾಂಕಾ ಉಪೇಂದ್ರ, ಅದಿತಿ ಪ್ರಭುದೇವ, ಆಶಿಕಾ ರಂಗನಾಥ್, ಸಂಜನಾ ಆನಂದ್ ಮುಂತಾವರು ಸಹ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳೆಲ್ಲ ಮುಂದಿನ ವರ್ಷ ಬಿಡುಗಡೆಯಾಗಲಿವೆ.

‘ಏಕ್ ಲವ್ ಯಾ’, ‘100’, ‘ರವಿ ಬೋಪಣ್ಣ’ ಮತ್ತು ‘ಸೂಪರ್ ಮಚ್ಚಿ’ ಚಿತ್ರಗಳಲ್ಲಿ ರಚಿತಾ ರಾಮ್ ತಮ್ಮ ಕೆಲಸ ಮುಗಿಸಿದ್ದಾರೆ. ಅವೆಲ್ಲ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗುವುದರ ಜತೆಗೆ ‘ಮಾನ್ಸೂನ್ ರಾಗ’, ‘ಲಿಲ್ಲಿ’, ‘ವೀರಂ’, ‘ಮ್ಯಾಟ್ನಿ’, ‘ಪಂಕಜ ಕಸ್ತೂರಿ’ ಮತ್ತು ಹೆಸರಿಡದ ಹೊಸ ಚಿತ್ರವೊಂದನ್ನು ರಚಿತಾ ಹೊಸದಾಗಿ ಒಪ್ಪಿಕೊಂಡಿದ್ದಾರೆ. ಅವೆಲ್ಲ ಮುಂದಿನ ವರ್ಷ ಬಿಡುಗಡೆಯಾಗಲಿವೆ. ಇನ್ನು, ‘ಅಮೃತಮತಿ’ ಮತ್ತು ‘ಹ್ಯಾಪಿ ಎಂಡಿಂಗ್’ ಚಿತ್ರಗಳಲ್ಲಿನ ತಮ್ಮ ಕೆಲಸವನ್ನು ಹರಿಪ್ರಿಯಾ ಮುಗಿಸಿದ್ದಾರೆ. ಇದಲ್ಲದೆ ‘ಪೆಟ್ರೋಮ್ಯಾಕ್ಸ್’, ‘ಲಗಾಮ್, ‘ಎವರು’ ರೀಮೇಕ್ ಮತ್ತು ‘ಬೆಲ್ ಬಾಟಮ್ 2’ ಚಿತ್ರಗಳನ್ನು ಹರಿಪ್ರಿಯಾ ಹೊಸದಾಗಿ ಒಪ್ಪಿದ್ದಾರೆ.

ಅದಿತಿ ಪ್ರಭುದೇವ ಅಭಿನಯದ ‘ಒಂಬತ್ತನೇ ದಿಕ್ಕು’ ಮತ್ತು ‘ತೋತಾಪುರಿ 1’ ಮುಗಿದಿದ್ದು, ‘ತೋತಾಪುರಿ 2’, ‘ದಿಲ್ಮಾರ್’, ‘ಓಲ್ಡ್ ಮಾಂಕ್’, ‘ಗಜಾನನ ಆಂಡ್ ಗ್ಯಾಂಗ್’, ‘ಆನ’, ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಮತ್ತು ‘ಥ್ರಿಬ್ಬಲ್ ರೈಡಿಂಗ್ ಚಿತ್ರಗಳನ್ನು ಹೊಸದಾಗಿ ಒಪ್ಪಿಕೊಂಡಿದ್ದಾರೆ. ಸಂಜನಾ ಆನಂದ್ ಅಭಿನಯದ ‘ಸಲಗ’, ‘ಕುಷ್ಕ’, ‘ವಿಂಡೋ ಸೀಟ್’, ‘ಶೋಕಿವಾಲ’ ಚಿತ್ರಗಳು ಈಗಾಗಲೇ ಬಿಡುಗಡೆಗೆ ಸಿದ್ಧವಿದ್ದು, ‘ಅದ್ಧೂರಿ ಲವ್ವರ್ ಸೇರಿದಂತೆ ಇನ್ನೆರಡು ಹೊಸ ಸಿನಿಮಾಗಳನ್ನು ಸಂಜನಾ ಒಪ್ಪಿದ್ದಾರೆ. ‘ಅವತಾರ್ ಪುರುಷ - ಅಷ್ಟದಿಗ್ಬಂಧನ ಮಂಡಲಕ’ ಮತ್ತು ‘ಅವತಾರ್ ಪುರುಷ - ತ್ರಿಶಂಕು’ ಚಿತ್ರಗಳನ್ನು ಮುಗಿಸಿರುವ ಆಶಿಕಾ ರಂಗನಾಥ್, ‘ರೆಮೋ’ ಮತ್ತು ‘ಮದಗಜ’ ಚಿತ್ರಗಳಲ್ಲಿದ್ದಾರೆ. ಪ್ರಿಯಾಂಕಾ ಉಪೇಂದ್ರ ಸಹ ಐದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕನ್ನಡದಲ್ಲಿ ಹೇಳಿಕೊಳ್ಳುವ ನಟಿಯರಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಆ ಆರೋಪವನ್ನು ಇಂದು ಹಲವರು ಸುಳ್ಳು ಮಾಡಿ ತೋರಿಸಿದ್ದಾರೆ, ಈಗೇನಂತೀರಿ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net