ರಾಕ್​ಸ್ಟಾರ್​ ಆಗಲಿರುವ 'ರೆಮೋ' ...ಸದ್ಯದಲ್ಲೇ ಹಾಡಿನ ಚಿತ್ರೀಕರಣ

Raymo - Final
Published on

ಬೆಂಗಳೂರು: ಪವನ್​ ಒಡೆಯರ್​ ನಿರ್ದೇಶನದ 'ರೆಮೋ' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು. ಈ ಹಂತದಲ್ಲಿ ನಾಯಕನ ಇಂಟ್ರೊಡಕ್ಷನ್​ ಹಾಡನ್ನು ಚಿತ್ರತಂಡ ಚಿತ್ರೀಕರಿಸಲು ಸಿದ್ಧತೆ ನಡೆಸಿದ್ದು, ಅದಕ್ಕಾಗಿ ಸೆಟ್​ ನಿರ್ಮಿಸಲಾಗುತ್ತಿದೆ.

ಚಿತ್ರದಲ್ಲಿ ನಾಯಕ ಒಬ್ಬ ರಾಕ್​ಸ್ಟಾರ್​ ಆಗಿದ್ದು, ಆತನ ಪರಿಚಯಿಸುವ ಹಾಡು ಇದಾಗಿದೆ. ಅದಕ್ಕಾಗಿಯೇ, ಕೆಂಗೇರಿಯ ಉಲ್ಲಾಳ ಬಳಿಯಿರುವ ಸನ್​ಸೆಟ್​ ಪಾಯಿಂಟ್​ನಲ್ಲಿ ವಿಶೇಷ ಸೆಟ್​ ಹಾಕಲಾಗುತ್ತಿದೆ. ಸದ್ಯದಲ್ಲೇ ಈ ಸೆಟ್​ ಕೆಲಸ ಮುಕ್ತಾಯವಾಗಲಿದ್ದು, ಆ ನಂತರ ಚಿತ್ರತಂಡ ಈ ಸೆಟ್​ನಲ್ಲಿ ಚಿತ್ರೀಕರಣ ಮಾಡಲಿದೆ.

ಇತ್ತೀಚೆಗೆ, ಈ ಸೆಟ್​ ವೀಕ್ಷಿಸಲು ಪವನ್​ ಒಡೆಯರ್​, ನಾಯಕ ಇಶಾಂತ್​ ಮತ್ತು ನೃತ್ಯ ನಿರ್ದೇಶಕ ಇಮ್ರಾನ್​ ಸರ್ದಾರಿಯಾ ಸನ್​ಸೆಟ್​ ಪಾಯಿಂಟ್​ಗೆ ಹೋಗಿ, ಚಿತ್ರೀಕರಣ ಹೇಗೆಲ್ಲಾ ಮಾಡಬೇಕು ಎಂದು ಚರ್ಚೆ ಮಾಡಿ ಬಂದಿದ್ದಾರೆ. ಈ ಸೆಟ್​ಗೆ ಒಂದೂವರೆ ಕೋಟಿ ರೂ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ ಹಾಡನ್ನು 20ಕ್ಕೂ ಹೆಚ್ಚು ಕ್ಯಾಮೆರಾಗಳ ಮೂಲಕ ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

'ರೆಮೋ' ಚಿತ್ರದಲ್ಲಿ ಇಶಾನ್​, ಆಶಿಕಾ ರಂಗನಾಥ್​, ಶರತ್​ ಕುಮಾರ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪವನ್​ ಒಡೆಯರ್​ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ವೈದಿ ಅವರ ಛಾಯಾಗ್ರಹಣವಿದೆ.

ಈ ಚಿತ್ರವನ್ನು ಸಿ.ಆರ್. ಮನೋಹರ್​ ನಿರ್ಮಿಸುತ್ತಿದ್ದು, ಚಿತ್ರ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇಶಾನ್​ ಅಭಿನಯದ ಮೊದಲ ಚಿತ್ರ 'ರೋಗ್​' ಸಹ ಕನ್ನಡವಲ್ಲದೆ, ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಈಗ 'ರೆಮೋ' ಸಹ ಎರಡು ಭಾಷೆಗಳಲ್ಲಿ ಬಿಡಗುಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net