

ಬೆಂಗಳೂರು: ‘ನನಗೆ ನೀವು, ನಿಮಗೆ ನಾನು. ಇನ್ನು ಮುಂದೆ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ಸಿನಿಮಾ, ಜೀ ವಾಹಿನಿ ಕಾರ್ಯಕ್ರಮಕ್ಕೆ ಮೀಸಲು ಈ ಬದುಕು. ಕಾರಣ ತುಂಬ ತಾಮಸವಾಗಿದೆ ನಮ್ಮ ರಂಗ. ದೊಡ್ಡವರು ಬದುಕಿರುವಾಗಲೇ ಅಪಮಾನಿಸಿ, ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ ...’- ಹಾಗೆಂದು ಟ್ವೀಟ್ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ ಹಿರಿಯ ನಟ ಜಗ್ಗೇಶ್. ಕಾರಣ, ದರ್ಶನ್ ಅಭಿಮಾನಿಗಳು ಇತ್ತೀಚೆಗೆ ಅವರಿಗೆ ಘೇರಾವ್ ಮಾಡುವುದರ ಜತೆಗೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಇದರಿಂದ ನೊಂದಿರುವ ಜಗ್ಗೇಶ್, ಈ ವಿಷಯವಾಗಿ ಮಂಗಳವಾರ ಬೆಳಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ‘ನನ್ನನ್ನು ಯಾರೂ ಘೇರಾವ್ ಮಾಡಿಲ್ಲ. ಯಾರೂ ನನ್ನ ಮೈ ಮುಟ್ಟುವುದಕ್ಕೆ ಸಾಧ್ಯವಿಲ್ಲ. ನಾನು ಒಬ್ಬ ದೀಕ್ಷೆ ಆಗಿರುವ ವ್ಯಕ್ತಿ. ನಾನಾಯಿತು, ನನ್ನ ಕುಟುಂಬವಾಯಿತು, ಕೆಲಸವಾಯಿತು ಅಂತಿರುವ ಮನುಷ್ಯ. ಅವಕಾಶ ಇದ್ದರೆ ಬಂದು ನಟನೆ ಮಾಡಿ ಹೋಗುತ್ತೀನಿ. ನನ್ನನ್ನು ಪ್ರೀತಿಸುವ ಕೋಟ್ಯಂತರ ಆತ್ಮಗಳಿವೆ. ನನ್ನ ಪಾಡಿಗೆ ನನ್ನನ್ನು ಕನ್ನಡದ ಕೆಲಸ ಮಾಡುವುದಕ್ಕೆ ಬಿಡಿ’ ಎಂದು ಅವರು ಹೇಳಿದ್ದಾರೆ.
ಫಿಲಂ ಚೇಂಬರ್ಗೆ ಅಭಿಮಾನಿಗಳ ದೂರು: ಈ ಮಧ್ಯೆ, ಜಗ್ಗೇಶ್ ಅವರ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. 40 ವರ್ಷಗಳಿಂದ ಸೇವೆ ಸಲ್ಲಿಸಿರುವ ಜಗ್ಗೇಶ್ರನ್ನು ದರ್ಶನ್ ಅಭಿಮಾನಿಗಳು ನಡೆಸಿ ಕೊಂಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಶನ್ ಸುಮ್ಮನಿರುವುದು ಏಕೆ?: ಇದುವರೆಗೂ ದರ್ಶನ್ ಮಾತ್ರ ಪ್ರತಿಕ್ರಿಯೆ ನೀಡಿಲ್ಲ. ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ದರ್ಶನ್ ಜತೆಗೇ ಮಾತಾಡಿರುವುದಾಗಿ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ, ಸಾಮರಸ್ಯದಿಂದ ಇರುವುದಾಗಿಯೂ ಹೇಳಿಕೊಂಡಿದ್ದರು. ಆದರೆ, ಈ ಯಾವುದೇ ವಿಷಯವಾಗಿ ದರ್ಶನ್ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
ವಿವಾದದ ನಡುವೆ ವಿವಾಹ: ಒಂದು ಕಡೆ ವಿವಾದ ತಾರಕಕ್ಕೇರಿದರೆ, ಇನ್ನೊಂದು ಕಡೆ ಜಗ್ಗೇಶ್ ವಿವಾಹದಲ್ಲಿ ಬಿಜಿಯಾಗಿದ್ದರು. ‘ತೋತಾಪುರಿ’ ಚಿತ್ರದ ಮದುವೆ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದು, ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅವರ ಮದುವೆಯ ಸನ್ನಿವೇಶಗಳನ್ನು ಮಂಗಳವಾರ ಚಿತ್ರೀಕರಿಸಿಕೊಳ್ಳಲಾಗಿದೆ.
ತನ್ನ ಕೈವಾಡವಿಲ್ಲ ಎಂದ ವಿಖ್ಯಾತ್: ಜಗ್ಗೇಶ್ ಮತ್ತು ತಮ್ಮ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ತಾನು ಬಿಡುಗಡೆ ಮಾಡಿಲ್ಲ. ಆ ಆಡಿಯೋ ಕ್ಲಿಪ್ ಹೇಗೆ ಹಂಚಿಕೆಯಾಯಿತು ಎನ್ನುವುದರ ಬಗ್ಗೆ ತನಿಖೆಯಾಗಲಿ ಎಂದು ನಿರ್ವಪಕ ವಿಖ್ಯಾತ್ ಹೇಳಿದ್ದಾರೆ.