

ಬೆಂಗಳೂರು: ‘ಒಬ್ಬ ಮನುಷ್ಯ ಆಸೆಪಟ್ಟು ಕೆಲಸ ಮಾಡಿದರೆ ಇಡೀ ಜಗತ್ತು ಅವನ ಬೆನ್ನ ಹಿಂದೆ ನಿಲ್ಲುತ್ತದೆ ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆ...’ ಯಶ್ ಹೇಳಿದ್ದು ‘ಕೆಜಿಎಫ್ 2’ ಚಿತ್ರದ ಬಗ್ಗೆ. ಎಂಟು ವರ್ಷಗಳ ಹಿಂದೆ ಅವರು ‘ಕೆಜಿಎಫ್’ ಚಿತ್ರ ಶುರು ಮಾಡಿದಾಗ, ಅದು ಇಷ್ಟು ದೊಡ್ಡದಾಗಿ ಬೆಳೆಯಬಹುದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಬಹುದು, ಜಾಗತಿಕವಾಗಿ ಬಿಡುಗಡೆಯಾಗಬಹುದು ... ಎಂದು ನಿರೀಕ್ಷಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಈಗ ಅವೆಲ್ಲವೂ ಆಗುತ್ತಿದೆ. ‘ಕೆಜಿಎಫ್’ ಯಶಸ್ವಿಯಾಗಿದ್ದಷ್ಟೇ ಅಲ್ಲ, ಇಂದು ಬಿಡುಗಡೆಯಾಗುತ್ತಿರುವ ಅದರ ಮುಂದುವರಿದ ಭಾಗದ ಕುರಿತು ಸಾಕಷ್ಟು ಕುತೂಹಲ, ನಿರೀಕ್ಷೆಗಳಿವೆ.
ಈ ಬಗ್ಗೆ ಯಶ್ ಏನು ಹೇಳುತ್ತಾರೆ?
‘ಇದು ಬರೀ ನನ್ನೊಬ್ಬನಿಂದ ಆಗಿದ್ದಲ್ಲ. ನಾನು ಇಲ್ಲಿ ಮುಖ ಅಷ್ಟೇ. ಇಂಥದ್ದೊಂದು ಕನಸು ಕಂಡ ಪ್ರಶಾಂತ್ ನೀಲ್, ಆ ಕನಸಿನ ಮೇಲೆ ನಂಬಿಕೆ ಇಟ್ಟ ವಿಜಯ್ ಕುಮಾರ್ ಕಿರಗಂದೂರು ಬಹಳ ಕಷ್ಟಪಟ್ಟಿದ್ದಾರೆ. ಎರಡು ಎನರ್ಜಿಗಳು ಒಟ್ಟಿಗೆ ಸೇರಿದರೆ ಏನೋ ಆಗುತ್ತದೆ. ಜನ ಈ ಚಿತ್ರವನ್ನು ಇಷ್ಟಪಟ್ಟರೆ, ಇನ್ನೂ ದೊಡ್ಡ ಶಕ್ತಿ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ.
ಈ ಚಿತ್ರದಿಂದ ತುಂಬಾ ಕಲಿತೆ ಎನ್ನುವ ಅವರು, ‘ಈ ಜರ್ನಿ ಅದ್ಭುತವಾಗಿತ್ತು. ನಾವು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಒಳ್ಳೆಯ ಸಮಯ ಕಳೆದಿದ್ದೇವೆ. ಇನ್ನಷ್ಟು ಗಟ್ಟಿಯಾಗಿದ್ದೇವೆ. ಕೆಲವೊಮ್ಮೆ ನಮ್ಮ ಅಭಿಪ್ರಾಯಗಳು ಬೇರೆ ಆಗಿರಬಹುದು. ಆದರೆ, ನಾವು ಸಿನಿಮಾ ಬಿಟ್ಟು ಬೇರೇನೂ ಯೋಚಿಸಲೇ ಇಲ್ಲ. ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎನ್ನುತ್ತಾರೆ ಯಶ್.
ಸರಿ ಯಶ್ ಮುಂದೆ ಯಾವ ತರಹದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ? ಈ ವಿಷಯ ನಿರ್ದೇಶಕರಿಗೆ ಬಿಟ್ಟಿದ್ದು ಎಂಬುದು ಅವರ ಅಭಿಪ್ರಾಯ. ‘ನಾನೇನು ಮಾಡಬಹುದು ಎಂದು ನಿರ್ದೇಶಕರು ಯೋಚಿಸುತ್ತಾರೆ. ಚಿತ್ರಕಥೆಗೆ ಪೂರಕವಾಗಿದ್ದರೆ, ಎಂತಹ ಪಾತ್ರವಾದರೂ ನಟಿಸುವುದಕ್ಕೆ ಸಿದ್ಧ. ಅದು ಕಥೆಗೆ ಬೇಕಾಗಿರಬೇಕು ಅಷ್ಟೇ’ ಎಂಬುದು ಯಶ್ ನಿಲುವು. ‘ಕೆಜಿಎಫ್ 2’ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್ನಡಿ ವಿಜಯ್ ಕುಮಾರ್ ಕಿರಗಂದೂರು ನಿರ್ವಿುಸಿದರೆ, ಪ್ರಶಾಂತ್ ನೀಲ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದು ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ಅಭಿನಯಿಸಿದ್ದಾರೆ.
‘ಕೆಜಿಎಫ್ 2’ ಚಿತ್ರದ ಬಗ್ಗೆ ತೀವ್ರ ಕುತೂಹಲ ಮತ್ತು ನಿರೀಕ್ಷೆಗಳಿವೆ. ಚಿತ್ರವು ಬುಧವಾರವೇ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದು, ಇಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಒಟ್ಟಾರೆ ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ಬಿಡುಗಡೆಯಾಗುತ್ತಿದ್ದು, ಭಾರತದಲ್ಲೇ ಐದು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಕರ್ನಾಟಕವಲ್ಲದೆ ಆಂಧ್ರ, ತೆಲಂಗಾಣ ಮತ್ತು ಉತ್ತರ ಭಾರತದಲ್ಲಿ ಬಹಳ ಬೇಡಿಕೆ ಇದ್ದು, ಮುಂಬೈ ಮತ್ತು ಪುಣೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಭಾರತದಲ್ಲಿ ಒಂದೇ ದಿನಕ್ಕೆ 120 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇದಕ್ಕೂ ಮುನ್ನ ‘ಆರ್ಆರ್ಆರ್’ ಚಿತ್ರವು ಮೊದಲ ದಿನವೇ ಭಾರತದಲ್ಲಿ 156 ಕೋಟಿ ರೂ.ಗಳ ಗ್ರಾಸ್ ಸಂಗ್ರಹ ಮಾಡಿತ್ತು. ಮಿಕ್ಕಂತೆ ಬೇರೆ ದೇಶಗಳಲ್ಲಿ ಬಿಡುಗಡೆ ಸೇರಿದಂತೆ ಒಟ್ಟಾರೆ 223 ಕೋಟಿ ರೂ.ಗಳ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿತ್ತು. ಆ ದಾಖಲೆಯನ್ನು ‘ಕೆಜಿಎಫ್ 2’ ಮುರಿಯುತ್ತದೆಯೇ ಎಂದು ಕಾದು ನೋಡಬೇಕು.