ಕಂಗನಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ ... ಜಾವೇದ್​ ಅಖ್ತರ್​ ಹೀಗೆ ಹೇಳಿದ್ದು ಯಾಕೆ?

Javed - Kangana - Final
Published on

ಯಾವಾಗ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರೋ, ಆಗಿನಿಂದ ಕಂಗನಾ ಸುದ್ದಿಯಲ್ಲಿದ್ದಾರೆ. ಪ್ರಮುಖವಾಗಿ ನೆಪೋಟಿಸಂ ಅಥವಾ ಸ್ವಜನಪಕ್ಷಪಾತದ ವಿಷಯ ಬಂದಾಗ, ಕಂಗನಾ ರಣಾವತ್​ ಅವರನ್ನು ಬಟ್ಟು ಮಾತನಾಡುವುದೇ ಕಷ್ಟ.

ಆ ಮಟ್ಟಿಗೆ, ಅವರು ಬಾಲಿವುಡ್​ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತ್ರದ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಸಮರ ಸಾರಿಕೊಂಡೇ ಬಂದಿದ್ದಾರೆ. ಸ್ಟಾರ್ ಮಕ್ಕಳಿಂದಾಗಿ, ಹಲವು ಪ್ರತಿಭಾವಂತರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ವಾದ ಮಾಡುತ್ತಲೇ ಇದ್ದಾರೆ.

ಆದರೆ, ಈ ವಿಷಯವನ್ನು ಬಾಲಿವುಡ್​ನ ಬಹಳಷ್ಟು ಮಂದಿ ಒಪ್ಪುವುದಿಲ್ಲ. ಸ್ಟಾರ್ ಮಕ್ಕಳಿಗೆ ಆರಂಭದಲ್ಲಿ ಸುಲಭವಾಗಿ ಕೆಲಸವೇನೋ ಸಿಗಬಹುದು. ಆದರೆ, ನಂತರ ಅವರ ಸಾಕಷ್ಟು ಪರಿಶ್ರಮ ಪಡಬೇಕು ಎಂದು ಹೇಳುತ್ತಲೇ ಬಂದಿದ್ದಾರೆ. ಈಗ ಹಿರಿಯ ಗೀತರಚನೆಕಾರ ಜಾವೇದ್​ ಅಖ್ತರ್​ ಈ ಕುರಿತು ಮೊದಲ ಬಾರಿಗೆ ಮಾತನಾಡಿದ್ದು, ಸ್ವಜನಪಕ್ಷಪಾತ ಇಲ್ಲ ಎನ್ನುವುದಕ್ಕೆ ಕಂಗನಾಗಿಂಥ ದೊಡ್ಡ ಉದಾಹರಣೆ ಬೇಕಿಲ್ಲ ಎಂದಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಕಂಗನಾ ಚಿತ್ರರಂಗದಲ್ಲಿ ಇಷ್ಟು ದೂರ ನಡೆದು ಬಂದಿದ್ದಾರೆ ಮತ್ತು ಜನಪ್ರಿಯರಾಗಿದ್ದಾರೆ ಎಂಬ ಒಂದು ಅಂಶ ಸಾಕು, ಸ್ವಜಪಕ್ಷಪಾತದಿಂದ ಹೊರಗಿನವರಿಗೆ ಕೆಲಸ ಸಿಗುತ್ತಿಲ್ಲ ಎಂಬ ವಾದದಲ್ಲಿ ಹುರುಳಿಲ್ಲ ಎಂಬುದು' ಎಂದು ಜಾವೇದ್​ ಹೇಳಿದ್ದಾರೆ.

'ಕಂಗನಾಗೆ ಚಿತ್ರರಂಗದಲ್ಲಿ ಯಾವುದೇ ಗಾಡ್​ಫಾದರ್​ಗಳಿಲ್ಲ. ಅವರೇ ಹೇಳುವಂತೆ ಅವರು ಹೊರಗಿನವರು. ಚಿತ್ರರಂಗದ ಸಂಬಂಧವೇ ಇಲ್ಲದೆ, ಇಲ್ಲಿಗೆ ಬಂದು ಇಷ್ಟು ದೊಡ್ಡದಾಗಿ ಬೆಳೆದವರು. ಒಂದು ಪಕ್ಷ ಸ್ವಜಪಕ್ಷಪಾತದಿಂದ ಹೊರಗಿನವರಿಗೆ ಕೆಲಸ ಸಿಗುತ್ತಿಲ್ಲ ಅಥವಾ ಅದೇ ಕಾರಣಕ್ಕೆ ಹೊರಗಿನವರನ್ನು ತುಳಿಯಲಾಗುತ್ತದೆ ಎಂದರೆ, ಕಂಗನಾ ಇಷ್ಟು ಎತ್ತರಕ್ಕೆ ಬೆಳೆದು ಬರಲು ಸಾಧ್ಯವೇ ಇರಲಿಲ್ಲ' ಎಂದು ಜಾವೇದ್​ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಜಾವೇದ್​ ಅವರ ಮಗಳು ಮತ್ತು ಜನಪ್ರಿಯ ನಿರ್ದೇಶಕಿ ಜೋಯಾ, 'ಇಂದು ಚಿತ್ರರಂಗದಲ್ಲಿ ಹಲವರು ಹೊರಗಿನಿಂದ ಬಂದಿದ್ದಾರೆ. ಅನುರಾಗ್​ ಕಶ್ಯಪ್​ ತರಹದವರು ಎಷ್ಟೋ ಜನರನ್ನು ಪರಿಚಯಿಸಿದ್ದಾರೆ. ಅವರು ಸಹ ಹೊರಗಿನವರೇ. ತಮ್ಮ ಜತೆಗೆ ನವಾಜುದ್ದೀನ್​ ಸಿದ್ದೀಖಿ, ಕಲ್ಕಿ ಕೊಚಿನ್​, ವಿಕ್ಕಿ ಕೌಶಾಲ್​, ರಾಧಿಕಾ ಆಪ್ಟೆ ಮುಂತಾದ ಹಲವರನನು ಪರಿಚಯಿಸಿದ್ದಾರೆ. ಹಾಗೆ ಹೊರಗಿನಿಂದ ಬಂದ ಬಹಳಷ್ಟು ಜನ ಇಲ್ಲಿದ್ದಾರೆ. ಹಾಗಾಗಿ ಎಲ್ಲದಕ್ಕೂ ಸ್ವಜನಪಕ್ಷಪಾತವೇ ಹೊಣೆ ಎಂದು ಹೇಳುವುದು ಕಷ್ಟ. ಇನ್ನು ನಾನು ಸಹ ಸಿನಿಮಾ ಕುಟುಂಬದಿಂದ ಬಂದವಳು ಮತ್ತು ಚಿತ್ರರಂಗದಿಂದಲೇ ಗುರುತಿಸಿಕೊಂಡವಳು. ಇದರಲ್ಲಿ ನನ್ನ ತಪ್ಪು ಏನಿದೆ ಹೇಳಿ? ನನಗೆ ಮನೆಯವರೂ ಇಷ್ಟ ಮತ್ತು ಚಿತ್ರ ಮಾಡುವುದೂ ಇಷ್ಟ. ನನಗೆ ಮನೆಯವರನ್ನೂ ಬಿಡುವುದಕ್ಕೆ ಇಷ್ಟವಿಲ್ಲ, ಚಿತ್ರರಂಗವನ್ನೂ ಬಿಡುವುದಕ್ಕೆ ಇಷ್ಟವಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net