ಕರೊನಾ ಹಿನ್ನೆಲೆ, ಫ್ಯಾನ್ಸ್​ಗೆ ಶಿವಣ್ಣ ಮಾಡಿದ್ದಾರೊಂದು ಮನವಿ..

collage (1)
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್ ನಟರು ತಮ್ಮ ಅದ್ದೂರಿ ಜನ್ಮದಿನಾಚರಣೆಗೆ ಪೂರ್ಣವಿರಾಮ ಇಟ್ಟಿದ್ದಾರೆ. ಅಭಿಮಾನಿಗಳಲ್ಲಿ ಮನವಿ ಮಾಡಿ, ದಯವಿಟ್ಟು ಯಾರೂ ಮನೆ ಬಳಿ ಬರಬೇಡಿ. ಮನೆಯಲ್ಲಿಯೇ ಇರಿ ಸೇಫಾಗಿರಿ ಎಂದು ಬೇಡಿಕೊಂಡಿದ್ದಾರೆ. ಇದೀಗ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಸಹ ಜನ್ಮದಿನಕ್ಕೆ ಸಂಬಂಧಪಟ್ಟಂತೆ ಪುಟಾಣಿ ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು, ಜುಲೈ 12ಕ್ಕೆ ಶಿವರಾಜ್​ಕುಮಾರ್ ಜನ್ಮದಿನ. ಪ್ರತಿ ವರ್ಷ ಬೇರೆ ಬೇರೆ ಊರುಗಳಿಂದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರಲು ಅವರ ಮನೆ ಬಳಿ ಆಗಮಿಸುತ್ತಿದ್ದರು. ಆದರೆ, ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಯಾವುದೇ ಆಚರಣೆ ಬೇಡ ಎಂದಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ತಿಂಗಳು ನನ್ನ ಜನ್ಮದಿನವಿದೆ. ಆವತ್ತು ನಾನು ಮನೆಯಲ್ಲಿ ಇರಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ. ಆವತ್ತು ನೀವೆಲ್ಲರೂ ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ನನಗೂ ಅಷ್ಟೆ ನೋವಾಗುತ್ತೆ. ಆದರೆ ಈ ಹುಟ್ಟುಹಬ್ಬದಲ್ಲಿ ನನ್ನ ಆರೋಗ್ಯಕ್ಕಿಂತ, ನಿಮ್ಮ ಆರೋಗ್ಯ ಮುಖ್ಯ. ಹೀಗಾಗಿ ನೀವೆಲ್ಲರೂ ನಿಮ್ಮ ಆರೋಗ್ಯ ನೋಡಿಕೊಳ್ಳಲಿ‘ ಎಂದು ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ ಕರೊನಾ ಮಾರಿ ತೊಲಗುತ್ತಿದ್ದಂತೆ ನಾವೆರಲ್ಲರೂ ಒಂದೆಡೆ ಸೇರೋಣ ಎಂದೂ ಹೇಳಿದ್ದಾರೆ. ‘ಈ ಕರೊನಾ ಮುಗಿದ ಮೇಲೆ, ಒಂದು ಕಡೆ ಭೇಟಿ ಮಾಡೋಣ. ಈ ಕೊರೊನಾಗೆ ಭಯಪಡುವಂತ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿ ಇರಬೇಕು. ಈ ಕರೊನಾ ಹೋಗಲು ಸಾಮಾಜಿಕ ಅಂತರ ಕಾಪಾಡಿ, ನಿಯಮಗಳನ್ನು ಪಾಲಿಸಿ. ನಮ್ಮೆಲ್ಲರನ್ನೂ ಕಾಪಾಡಲು ಆ ದೇವರು ಇದ್ದಾನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ. ಧೈರ್ಯವಾಗಿರಿ, ಸುರಕ್ಷಿತವಾಗಿರಿ’ ಎಂದಿದ್ದಾರೆ ಶಿವಣ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net