'ರವಿ-ಚಂದ್ರ' ಚಿತ್ರದ ಹೆಸರು ಬದಲಾಯ್ತಾ?

Ravi - Chandra - Final
Published on

ಕಳೆದ ವರ್ಷ ರವಿಚಂದ್ರನ್​ ಮತ್ತು ಉಪೇಂದ್ರ ಅಭಿನಯದಲ್ಲಿ 'ರವಿ-ಚಂದ್ರ' ಎಂಬ ಚಿತ್ರ ಸೆಟ್ಟೇರಿದ್ದು ನೆನಪಿರಬಹುದು. ಕನಕಪುರ ಶ್ರೀನಿವಾಸ್​ ನಿರ್ಮಾಣದ ಈ ಚಿತ್ರವು ದೊಡ್ಡ ಮಟ್ಟದಲ್ಲಿ ಲಾಂಚ್​ ಆಗಿತ್ತು. ಈಗ ಆ ಚಿತ್ರದ ಹೆಸರು ಬದಲಾಗಿದೆ ಎಂಬ ಸುದ್ದಿಯೊಂದು ಬಂದಿದೆ.

ಹೌದು, 'ರವಿ-ಚಂದ್ರ' ಚಿತ್ರಕ್ಕೆ 'ವೇದ-ವ್ಯಾಸ' ಎಂಬ ಹೆಸರನ್ನು ಇಡಲಾಗಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಆದರೆ, ಈ ಸುದ್ದಿ ನಿಜವಾ ಎಂಬ ಪ್ರಶ್ನೆ ಬರುವುದು ಸಹಜ. ಈ ಸುದ್ದಿ ಉಪೇಂದ್ರ ಅವರ ಅಭಿಮಾನಿಗಳ ಫೇಸ್​ಬುಕ್​ ಪೇಜ್​ನಲ್ಲೂ ಹರಿದಾಡುತ್ತಿದ್ದು, ಈ ವಿಷಯಕ್ಕೆ ಉಪೇಂದ್ರ ಅವರ ಅಕೌಂಟ್​ನಿಂದ ಥಂಬ್ಸ್​ ಅಪ್​ ಸಿಂಬಲ್​ ಸಿಕ್ಕಿದೆ. ಉಪೇಂದ್ರ ಅವರಿಂದಲೇ ಇಂಥದ್ದೊಂದು ಪ್ರತಿಕ್ರಿಯೆ ಸಿಕ್ಕಿರುವಾಗ, ಸುದ್ದಿ ನಿಜ ಇರಬಹುದು ಎಂದು ಹೇಳಲಾಗುತ್ತಿದೆ.

ಅಂದಹಾಗೆ, 'ರವಿ-ಚಂದ್ರ' ಅಥವಾ 'ವೇದ-ವ್ಯಾಸ' ಚಿತ್ರವು ತೆಲುಗಿನ 'ಬಲುಪು' ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರದಲ್ಲಿದ್ದ ತಂದೆ-ಮಗನ ಪಾತ್ರಗಳನ್ನು, ಇಲ್ಲಿ ಅಣ್ಣ-ತಮ್ಮನಾಗಿ ಬದಲಾಯಿಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಪ್ರಕಾಶ್​ ರೈ ಮತ್ತು ರವಿತೇಜ, ಅಪ್ಪ-ಮಗನಾಗಿ ಕಾಣಿಸಿಕೊಂಡಿದ್ದರು. ಇಲ್ಲಿ ರವಿಚಂದ್ರನ್​ ಮತ್ತು ಉಪೇಂದ್ರ, ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ಚಿತ್ರದ ಮುಹೂರ್ತ ಕಳೆದ ವರ್ಷ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದು, ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಒಂದಿಷ್ಟು ದಿನಗಳ ಚಿತ್ರೀಕರಣ ಮುಗಿದಿದ್ದು, ಸದ್ಯ ಕರೊನಾ ಹಾವಳಿಯ ಕಾರಣಕ್ಕೆ ಚಿತ್ರದ ಚಟುವಟಿಕೆಗಳು ನಿಂತಿವೆ. ಬಹುಶಃ ಇದೆಲ್ಲಾ ಮುಗಿದ ಮೇಲೆ, ಚಿತ್ರೀಕರಣ ಪುನಃ ಪ್ರಾರಂಭವಾಗುವ ಸಾಧ್ಯತೆ ಇದೆ.

ಅಂದಹಾಗೆ, ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂಪ್ರಕಾಶ್​ ರಾವ್​ ನಿರ್ದೇಶಿಸುತ್ತಿದ್ದು, ಶಾನ್ವಿ ಶ್ರೀವಾತ್ಸವ್​ ಮತ್ತು ನಿಮಿಕಾ ರತ್ನಾಕರ್​ ಇಬ್ಬರೂ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net