

ರಜನಿಕಾಂತ್ ಯಾವತ್ತೂ ತಮ್ಮ ಚಿತ್ರಗಳ ಕಥೆಗಳನ್ನು ಬಿಟ್ಟುಕೊಡುವುದಿಲ್ಲ. ಅವರೆಂದೂ ತಮ್ಮ ಹೊಸ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಹೆಚ್ಚು ಹೇಳುವುದಕ್ಕೆ ಹೋಗುವುದಿಲ್ಲ. ಏನಿದ್ದರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದು ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಹೇಳುತ್ತಾರೆ.
ಹೀಗಿರುವಾಗಲೇ, ರಜನಿಕಾಂತ್ ಅಭಿನಯದ ಮತ್ತು ಶಿವ ನಿರ್ದೇಶನದ 'ಅಣ್ಣಾತ್ತೆ' ಎಂಬ ಹೊಸ ಚಿತ್ರದ ಕಥೆ ಲೀಕ್ ಆಗಿಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ನಿಜವಾದ ಕಥೆಯೋ ಅಥವಾ ಸುಮ್ಮನೆ ಯಾರೋ ದಾರಿ ತಪ್ಪಿಸುವುದಕ್ಕೆ ಹೊರಟಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ತರಹದ್ದೊಂದು ಕಥೆ ಮಾತ್ರ ಎಲ್ಲೆಡೆ ಓಡಾಡುತ್ತಿದೆ.
ಇದರ ಪ್ರಕಾರ, ಚಿತ್ರದಲ್ಲಿ ರಜನಿಕಾಂತ್ ಅವರನ್ನು ಮದುವೆಯಾಗಬೇಕೆಂದು ಮೀನಾ ಮತ್ತು ಖುಷ್ಬೂ ಇಬ್ಬರೂ ಆಸೆಪಟ್ಟಿರುತ್ತಾರಂತೆ. ಆದರೆ, ರಜನಿಕಾಂತ್ ಅವರಿಗೆ ಇಬ್ಬರನ್ನೂ ಮದುವೆಯಾಗುವುದಕ್ಕೆ ಇಷ್ಟ ಇರುವುದಿಲ್ಲ. ಇಬ್ಬರನ್ನೂ ಬಿಟ್ಟು ಬೇರೆಯವರನ್ನು ಮದುವೆಯಾಗುತ್ತಾರಂತೆ. ಇದಾಗಿ ಹಲವು ವರ್ಷಗಳಾದರೂ ಖುಷ್ಬೂ ಮತ್ತು ಮೀನಾಗೆ ರಜನಿಕಾಂತ್ ಮೇಲೆ ಸಿಟ್ಟು ಹೋಗುವುದಿಲ್ಲ. ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕೆಂದು, ಅವರಿಬ್ಬರೂ ತಮ್ಮ ಮಕ್ಕಳನ್ನೂ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುವುದಕ್ಕೆ ಪ್ರೇರೇಪಿಸುತ್ತಾರಂತೆ. ಈ ಮಧ್ಯೆ, ನಯನತಾರಾ ಎಂಟ್ರಿಯಾಗುತ್ತದಂತೆ. ಮುಂದೇನಾಗುತ್ತದೆ ಎಂಬುದನ್ನು ಸದ್ಯ ರಿವೀಲ್ ಮಾಡಿಲ್ಲ.
ಮೊದಲೇ ಹೇಳಿದಂತೆ, ಈ ಕಥೆ ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ, ಇಂಥದ್ದೊಂದು ಕಥೆ ಕೇಳಿ ರಜನಿಕಾಂತ್ ಅಭಿಮಾನಿಗಳು ಮಾತ್ರ ಸಖತ್ ಥ್ರಿಲ್ ಆಗಿದ್ದಾರಂತೆ. ರಜನಿಕಾಂತ್ ಇಷ್ಟು ದಿನ ಮಾಡಿಕೊಂಡು ಬಂದ ಕಥೆಗಳಿಗಿಂತ ವಿಭಿನ್ನವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಅಂದಹಾಗೆ, 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣ ಈಗಾಗಲೇ ಹೈದರಾಬಾದ್ನಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಪ್ರಗತಿಯಲ್ಲಿರುವಾಗಲೇ, ಲಾಕ್ಡೌನ್ ಘೋಷಣೆಯಾಯಿತು. ಹಾಗಾಗಿ ಚಿತ್ರತಂಡ ಅರ್ಧಕ್ಕೇ ನಿಲ್ಲಿಸಿ, ಚೆನ್ನೈಗೆ ವಾಪಸ್ಸಾಗಬೇಕಾಯಿತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರೀಕರಣ ಇನ್ನೂ ಮುಗಿದಿಲ್ಲವಾದ್ದರಿಂದ ಮತ್ತು ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ, ಚಿತ್ರದ ಬಿಡುಗಡೆ ಪೋಸ್ಟ್ಪೋನ್ ಆಗಿದೆ ಎಂದು ಹೇಳಲಾಗುತ್ತಿದೆ.