ಕೊನೆಗೂ ಅಂತ್ಯವಾಯಿತಾ ಸನ್ನಿ-ಶಾರೂಖ್ ನಡುವಿನ ಕೋಲ್ಡ್ ವಾರ್?

Shahrukh Khan - Sunny Deol Final
Published on

90ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ಬೇಡಿಕೆಯ ಮತ್ತು ಜನಪ್ರಿಯ ನಟರಲ್ಲಿ ಸನ್ನಿ ಡಿಯೋಲ್ ಮತ್ತು ಶಾರೂಖ್ ಖಾನ್ ಪ್ರಮುಖರು. ಈ ಇಬ್ಬರು ‘ಢರ್’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು ಕೂಡ. ಆದರೆ, ಆ ನಂತರ ಇಬ್ಬರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಇಬ್ಬರೂ ಮತ್ತೊಮ್ಮೆ ನಟಿಸುವುದಿರಲಿ, ಜತೆಯಾಗಿ ಕಾಣಿಸಿಕೊಂಡಿದ್ದೂ ಕಡಿಮೆಯೇ. ಈಗ 27 ವರ್ಷಗಳ ನಂತರ ಇವರಿಬ್ಬರ ನಡುವಿದ್ದ ಕೋಲ್ಡ್ ವಾರ್ ಮುಕ್ತಾಯವಾದಂತಿದೆ.

ಹೌದು, ‘ಢರ್’ ಚಿತ್ರದಲ್ಲಿ ಶಾರೂಖ್‌ಗೆ ಹೆಚ್ಚು ಸ್ಕೋಪ್ ಇದ್ದ ಕಾರಣ, ಸನ್ನಿ ಡಿಯೋಲ್ ಮುನಿಸಿಕೊಂಡಿದ್ದರು. ಈ ವಿಷಯವಾಗಿ ಶಾರೂಖ್ ಜತೆಗೆ ಯಾವತ್ತೂ ಜಗಳ ಮಾಡದಿದ್ದರೂ, ನೆಗೆಟಿವ್ ಪಾತ್ರಗಳನ್ನು ವೈಭವೀಕರಿಸುವುದರ ಕುರಿತು ಒಮ್ಮೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ಅವರಿಬ್ಬರ ನಡುವೆ ಕೋಲ್ಡ್ ವಾರ ನಡೆಯುತ್ತಿದೆ ಎಂಬ ವಿಷಯ ಮಾಧ್ಯಮಗಳಲ್ಲಿ ಕೇಳಿ ಬಂದರೂ, ಇಬ್ಬರೂ ಈ ಕುರಿತು ಪ್ರತಿಕ್ರಿಯಿಸಿರಲಿಲ್ಲ. ಅಷ್ಟೇ ಅಲ್ಲ, ಶಾರೂಖ್ ಮತ್ತು ಸನ್ನಿ ಇಬ್ಬರೂ ಪರಸ್ಪರ ದೂರವೇ ಇದ್ದರು. ಈಗ ಸ್ವತಃ ಶಾರೂಖ್, ಈ ಸಮರವನ್ನು ಅಂತ್ಯಗೊಳಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ಹೌದು, ಸನ್ನಿ ಮತ್ತು ಶಾರೂಖ್ ನಡುವಿನ ಕೋಲ್ಡ್ ವಾರ್ ಇನ್ನು ಮುಗಿದ ಕಥೆಯಂತೆ. ಇಷ್ಟಕ್ಕೂ ಆಗಿದ್ದೇನೆಂದರೆ, ಸನ್ನಿ ಡಿಯೋಲ್ ಅವರು ತಮ್ಮ ಸೂಪರ್ ಹಿಟ್ ಚಿತ್ರವಾದ ‘ದಾಮಿನಿ’ಯನ್ನು ಮಗನಿಗಾಗಿ ರೀಮೇಕ್ ಮಾಡಲು ಯೋಚಿಸುತ್ತಿದ್ದರಂತೆ. ಆದರೆ, ಆ ಚಿತ್ರದ ರೀಮೇಕ್ ಹಕ್ಕುಗಳು ಶಾರೂಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಳಿ ಇದೆಯಂತೆ. ಶಾರೂಖ್ ಹತ್ತಿರ ಹೇಗೆ ಕೇಳೋದು ಅಂತ ಸನ್ನಿ ಡಿಯೋಲ್ ಯೋಚಿಸುತ್ತಿದ್ದಾಗ, ಶಾರೂಖ್‌ಗೆ ಸನ್ನಿಗೆ ರೀಮೇಕ್ ರೈಟ್ಸ್ ಬೇಕಿರುವ ವಿಷಯ ಗೊತ್ತಾಗಿದೆ. ತಕ್ಷಣ, ಸನ್ನಿ ಮನೆಗೆ ಹೋದ ಶಾರೂಖ್, ರೀಮೇಕ್ ಹಕ್ಕುಗಳನ್ನು ಕೊಡುವುದರ ಜತೆಗೆ, ಈ ಚಿತ್ರವನ್ನು ನೀವೇ ಮಾಡಿ ಎಂದರಂತೆ. ಈ ಮೂಲಕ ತಮ್ಮ ನಡುವಿದ್ದ ಶೀತಲ ಸಮರವನ್ನು ಕೊನೆಗಾಣಿಸಿದರಂತೆ.

ರೀಮೇಕ್ ಹಕ್ಕುಗಳನ್ನು ಪಡೆದಿರುವ ಸನ್ನಿ, ಈಗ ತಮ್ಮ ಮಗನ ಅಭಿನಯದಲ್ಲಿ ಚಿತ್ರ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಮುಗಿದ ನಂತರ ಚಿತ್ರ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net