ಕಾಲನಾಗಿಣಿಯಾದ ಹರ್ಷಿಕಾ!; ಪಿರಿಯಾಡಿಕ್ ಡ್ರಾಮಾದಲ್ಲಿ ದ್ವಿಪಾತ್ರ..

Harshika
Published on

ಬೆಂಗಳೂರು: ‘ಇಲ್ಲಿಯವರೆಗೂ ಇಂಥದ್ದೊಂದು ಪಾತ್ರಕ್ಕೆ ನಾನು ಕಾಯುತ್ತಿದ್ದೆ. ಇದೀಗ ಅದು ನನಸಾಗಿದೆ. ಶಾಲಾ ದಿನಗಳಲ್ಲಿ ನಾಗಿಣಿ ಹಾಡುಗಳಿಗೆ ನೃತ್ಯ ಮಾಡುತ್ತಿದ್ದೆ. ಇದೀಗ ಸಿನಿಮಾದಲ್ಲಿ ನಾನೇ ನಾಗಿಣಿಯಾಗುತ್ತಿದ್ದೇನೆ’- ಹಿರಿಹಿರಿ ಹಿಗ್ಗುತ್ತಲೇ ‘ಕಾಲನಾಗಿಣಿ‘ ಸಿನಿಮಾ ಬಗ್ಗೆ ಹೇಳಿಕೊಳ್ಳುತ್ತಾರೆ ಚಂದನವನದ ನಟಿ ಹರ್ಷಿಕಾ ಪೂಣಚ್ಚ.

ಜೆಕೆ ಮತ್ತು ಕಾವ್ಯಾ ಶೆಟ್ಟಿ ಮುಖ್ಯಭೂಮಿಕೆಯ ‘ಕಾಡ’ ಸಿನಿಮಾ ನಿರ್ದೇಶನ ಮಾಡಿರುವ ವಿಶ್ರುತ್ ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳಲಿದ್ದಾರೆ. ಹಾಗಾದರೆ ಏನಿದು ‘ಕಾಲನಾಗಿಣಿ’? ಈ ಹೊಸ ಚಿತ್ರದ ಬಗ್ಗೆ ಸ್ವತಃ ಹರ್ಷಿಕಾ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ‘ಶೀರ್ಷಿಕೆ ಹೇಳುವಂತೆ ಇದೊಂದು ನಾಗಿಣಿ ಕುರಿತಾದ, ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ರಾಣಿಯಾಗಿ ಮತ್ತು ನಾಗಿಣಿಯಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಸಹ ಶುರುವಾಗಲಿದೆ’ ಎನ್ನುತ್ತಾರೆ.

ಇಲ್ಲಿಯವರೆಗೂ ಗ್ಲಾಮರಸ್ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದ ಹರ್ಷಿಕಾ, ಮೊದಲ ಬಾರಿ ನಾಗಿಣಿ ರೀತಿಯ ಪಾತ್ರ ಮಾಡುತ್ತಿದ್ದಾರೆ. ಅದಕ್ಕೆ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರವರು. ‘ಚಿತ್ರದ ಮುಖ್ಯ ಪಾತ್ರಧಾರಿ ನಾನೇ ಆಗಿರುವುದರಿಂದ, ದೊಡ್ಡ ಜವಾಬ್ದಾರಿಯನ್ನೇ ನಿರ್ದೇಶಕರು ನನ್ನ ಮೇಲೆ ಹೊರಿಸಿದ್ದಾರೆ. ಅದಕ್ಕಾಗಿ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದೇನೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಬೆಂಗಳೂರಿನಲ್ಲಿಯೇ ಭವ್ಯ ಸೆಟ್​ಗಳನ್ನು ಹಾಕಲಾಗುತ್ತಿದೆ. 21ರಿಂದ ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದೇನೆ’ ಎಂಬುದು ಹರ್ಷಿಕಾ ಮಾತು. ಇನ್ನು ತುಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಮನೋಜ್ ಪುತ್ತೂರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ‘ಉಗ್ರಂ’ ಮಂಜು, ವಿಜಯ್ ಚೆಂಡೂರ್ ಸೇರಿ ಹಲವರು ಸಿನಿಮಾದಲ್ಲಿದ್ದಾರೆ. ನಂದು ಸಂಗೀತ ನೀಡಿದರೆ, ಅರುಣ್ ಸುರೇಶ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಮಧುರ ಮೂವಿ ಬ್ಯಾನರ್ ಚಿತ್ರ ನಿರ್ವಿುಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net