ಹರಿಪ್ರಿಯಾ ಪ್ಯಾಶನ್ ಏನು ಗೊತ್ತಾ? ... ಬೇಬ್ ನೋಸ್ ಮೂಲಕ ಮನಸ್ಸಿನ ಮಾತು

Haripriya - Final
Published on

ಕನ್ನಡ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ಹರಿಪ್ರಿಯಾ ಪ್ರಮುಖರು. ಕಳೆದ ವರ್ಷ ಹರಿಪ್ರಿಯಾ ಅಭಿನಯದ ಏಳು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಸಹ ಹರಿಪ್ರಿಯಾ ಅಭಿನಯದ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕಿವೆ. ಕೆಲವು ವರ್ಷಗಳ ಹಿಂದೆಯೇ ಹರಿಪ್ರಿಯಾ ತಮ್ಮ ಮನಸ್ಸಿನ ಮಾತುಗಳನ್ನು ಬರೆದಿಡುತ್ತಿದ್ದರು. ಈಗ ‘ಬೇಬ್ ನೋಸ್ - ನಾಟ್ ಎವರಿಥಿಂಗ್’ ಎಂಬ ಬ್ಲಾಗ್ ಮೂಲಕ ಬ್ಲಾಗರ್ ಆಗಿದ್ದಾರೆ.

ನಟಿಯಾಗಿ ಒಳ್ಳೆಯ ಹೆಸರು ಮಾಡಿರುವಾಗ, ಹರಿಪ್ರಿಯಾಗೇಕೆ ಪೆನ್ ಹಿಡಿಯುವ ಮನಸ್ಸು ಬಂತು ಎಂಬ ಪ್ರಶ್ನೆ ಬರುವುದು ಸಹಜ. ಇದನ್ನು http://babeknows.com/ ಎಂಬ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ ಹರಿಪ್ರಿಯಾ. ಅವರು ಹೇಳುವಂತೆ ಬರವಣಿಗೆ ಎನ್ನುವುದು ಅವರ ಪಾಲಿಗೆ ಹೊಸ ಪ್ಯಾಶನ್. ಐದು ವರ್ಷಗಳ ಹಿಂದೆ ಅವರಿಗೆ ತಾವು ಬರೆಯಬಲ್ಲೆ ಎಂಬುದು ಸಹ ಗೊತ್ತಿರಲಿಲ್ಲವಂತೆ.

‘ನನ್ನ ತಂದೆಯ ನಿಧನದ ನಂತರ ನನ್ನ ಜೀವನದಲ್ಲಾದ ಇನ್ನೊಂದು ಕೆಟ್ಟ ಘಟನೆ ಎಂದರೆ ಅದು ಬ್ರೇಕಪ್. ಅದರಿಂದ ಆಚೆ ಬರುವುದಕ್ಕೆ ಸ್ವಲ್ಪ ಸಮಯವಾಯಿತು. ಡಿಪ್ರೆಶನ್‌ಗೆ ಹೋಗುವಷ್ಟು ವೀಕ್ ನಾನಲ್ಲ. ಬೇಸರದಲ್ಲಿ ಅತ್ತೆ, ಆ ನಂತರ ನನ್ನ ಮನಸ್ಸನ್ನು ಕೆಲಸದ ಕಡೆ ಕೇಂದ್ರೀಕರಿಸಿದೆ. ಕೆಲವು ವಿಷಯಗಳನ್ನು ಕೆಲವರೊಂದಿಗೆ ಹೇಳಿಕೊಳ್ಳಬೇಕು ಎಂದನಿಸುತಿತ್ತು. ಆದರೆ, ನಾನೊಬ್ಬ ಸೆಲೆಬ್ರಿಟಿ. ಜನ ಎಲ್ಲಿ ನನ್ನ ನೋವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೋ ಎಂಬ ಭಯವಿತ್ತು. ಬೇಸರವಾದಾಗಲೆಲ್ಲಾ ಬರೆಯುತ್ತಾ ಹೋದೆ. ಪೇಪರ್ ಮತ್ತು ಪೆನ್ ಕ್ರಮೇಣ ನನ್ನ ಬೆಸ್ಟ್​ಫ್ರೆಂಡ್​ಗಳಾದವು. ನನ್ನ ಅಮ್ಮನ ನಂತರ ನನ್ನ ಬೆಸ್ಟ್ಫ್ರೆಂಡ್​ ಯಾರು ಎಂದರೆ ಪೇಪರ್ ಮತ್ತು ಪೆನ್. ಬರೆಯುತ್ತಾ ಹೋದಂತೆ ಖುಷಿ, ನೆಮ್ಮದಿ ಎಲ್ಲಾ ಸಿಕ್ಕಿತು. ಹೀಗೆ ಶುರುವಾದ ಬರವಣಿಗೆ, ಕ್ರಮೇಣ ಪ್ಯಾಶನ್ ಆಯಿತು. ಈ ಬ್ಲಾಗ್ ಮೂಲಕ ಇನ್ಮುಂದೆ ನನ್ನ ಮನಸ್ಸಿನ ಮಾತುಗಳನ್ನು ಹೇಳುವ ಪ್ರಯತ್ನ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ ಹರಿಪ್ರಿಯಾ.

ಈಗಾಗಲೇ ಈ ಬ್ಲಾಗ್‌ನಲ್ಲಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಕೆಲವು ಲೇಖನಗಳನ್ನು ಹಂಚಿಕೊಂಡಿದ್ದಾರೆ. ಹರಿಪ್ರಿಯಾ ಇನ್ನೇನು ಹೇಳುವುದಕ್ಕೆ ಬಯಸುತ್ತಿದ್ದಾರೆ ಎಂಬ ಕುತೂಹಲವಿದ್ದರೆ ಅವರ ಬ್ಲಾಗ್ ನೋಡಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net