

ಯಾವುದೇ ದೊಡ್ಡ ಸ್ಟಾರ್ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಹನುಮಾನ್ ಅಂಶ್ ಎಂಟ್ರಿ
ಇದೀಗ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುತ್ತಿರುವ ಹಿಂದಿ ಸಿನಿಮಾ
ಲಕ್ಷ ಲಕ್ಷ ರೂ. ಬಂಡವಾಳ ಹಾಕಿದ ನಿರ್ಮಾಪಕರಿಗೆ ಕೋಟಿಗಟ್ಟಲೇ ಲಾಭ
ನವದೆಹಲಿ: ಯಾವುದೇ ದೊಡ್ಡ ಸ್ಟಾರ್ ತಾರಾಗಣವಿಲ್ಲದೆ, ಭರ್ಜರಿ ಪ್ರಚಾರವಿಲ್ಲದೆ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟ ವಿಶಾಲ್ ಚತುರ್ವೇದಿ ನಿರ್ದೇಶನದ 'ಹನುಮಾನ್ ಅಂಶ್' (Hanuman Ansh) ಚಿತ್ರವು ಇದೀಗ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುತ್ತಿದ್ದು, ಇದೀಗ ರಿಲೀಸ್ ಆದ 48ನೇ ದಿನಕ್ಕೆ 400 ಕೋಟಿ ರೂ. ಕ್ಲಬ್ಗೆ ಸನ್ನಿಹಿತವಾಗಿದೆ. ಸ್ಟಾರ್ ಹೀರೋಗಳ ಬಿಗ್ ಬಜೆಟ್ ಹಾಗೂ ಜೋರು ಪ್ರಚಾರ ಕಂಡ ಸಿನಿಮಾಗಳನ್ನೇ ಗಳಿಕೆಯಲ್ಲಿ ಹಿಂದಿಕ್ಕಿರುವುದು ತಮ್ಮ ಚಿತ್ರದ ಬಗ್ಗೆ 21 ವರ್ಷದ ಯುವ ನಿರ್ಮಾಪಕಿ ಮನಬಿಚ್ಚಿ ಮಾತನಾಡಿದ್ದಾರೆ.
ಯಶ್ ಅಭಿನಯದ 600 ಕೋಟಿ ರೂ. ಬಿಗ್ ಬಜೆಟ್ನ 'ಟಾಕ್ಸಿಕ್' (Toxic) ಚಿತ್ರಕ್ಕೂ ಮುನ್ನವೇ ರಿಲೀಸ್ ಆದರೂ ಬಾಕ್ಸ್ ಆಫೀಸ್ನಲ್ಲಿ ಸಖತ್ ಪೈಪೋಟಿ ಕೊಟ್ಟ 'ಹನುಮಾನ್ ಅಂಶ್', ಇದೀಗ ಅನಿರೀಕ್ಷಿತ ಹಾಗೂ ಭರ್ಜರಿ ಯಶಸ್ಸನ್ನೇ ಸಾಧಿಸಿದೆ. ಇಂದಿಗೂ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಕೈಬೀಸಿ ಕರೆತರುತ್ತಿರುವ ಚಿತ್ರವು, ನಿರ್ಮಾಪಕರ ಜೇಬನ್ನು ತುಂಬಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ಸಿನಿ ವರದಿಗಳ ಪ್ರಕಾರ, ಜಾಗತಿಕವಾಗಿ ಸಿನಿಮಾ ಬರೋಬ್ಬರಿ 400 ಕೋಟಿ ರೂ. ಗಳಿಕೆಗೆ ಇನ್ನೇನು ಕೆಲವೇ ಹೆಜ್ಜೆಗಳು ಬಾಕಿಯಿವೆ.
ಈ ಅನಿರೀಕ್ಷಿತ ಗೆಲುವಿನ ಬಗ್ಗೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದ ನಿರ್ಮಾಪಕಿ ಅನುಪ್ರಿಯಾ ನಗರ್, "ರಿಲೀಸ್ ಆದ ಮೊದಲ ದಿನವೇ ನಮ್ಮ ಪ್ರದರ್ಶನಗಳ ಸಂಖ್ಯೆ ತೀವ್ರವಾಗಿ ಕುಸಿತ ಕಂಡಿತ್ತು. 'ಟಾಕ್ಸಿಕ್' ಮತ್ತು 'ಅವಾರಪನ್ 2' ನಂತಹ ದೊಡ್ಡ ಚಿತ್ರಗಳು ತೆರೆಗೆ ಬಂದಿದ್ದರಿಂದ, ನಮ್ಮ ಸಿನಿಮಾಗೆ ಸಿಕ್ಕಿದ್ದ ಸ್ಕ್ರೀನ್ಗಳ ಸಂಖ್ಯೆ 350ರಿಂದ ಏಕಾಏಕಿ 30ಕ್ಕೆ ಕುಸಿಯಿತು. ಆದರೂ, ಆಶ್ಚರ್ಯ ಎನ್ನುವಂತೆ ನಮ್ಮ ಗಳಿಕೆ ಎಂದಿಗೂ ಕಡಿಮೆಯಾಗಲಿಲ್ಲ. ಇದು ತಂಡಕ್ಕೆ ನಿಜವಾದ ದೊಡ್ಡ ಭರವಸೆಯವನ್ನು ನೀಡಿತು" ಎಂದಿದ್ದಾರೆ.
ಆರಂಭದಲ್ಲಿ ನಮ್ಮ ಚಿತ್ರಕ್ಕೆ ಬಾಲಿವುಡ್‌ನ ಯಾರೊಬ್ಬರೂ ಸಹ ಸಹಾಯಕ್ಕೆ ಮುಂದಾಗಲಿಲ್ಲ. ಬಂಡವಾಳದ ಸಹಾಯ ಹಸ್ತ ನೀಡಲು ಹೋಗಿ ನಮ್ಮ ಕೈಸುಟ್ಟು ಕೊಂಡರೆ ಎಂಬ ಆತಂಕದಿಂದ ಬಾಲಿವುಡ್‌ನ ಅನೇಕರು ನಮ್ಮ ಹನುಮಾನ್ ಅಂಶ್ಗೆ ಕೈಜೋಡಿಸಲು ನಿರಾಕರಿಸಿದರು. ಹಾಗೆ ಮಾಡಿದವರ ಪೈಕಿ ಇಂದು ಅನೇಕರು ತಮ್ಮ ಬಳಿ ಬಂದು ಕ್ಷಮೆ ಕೂಡ ಕೇಳಿದ್ದಾರೆ ಎಂದು ಹೇಳಿದರು.
ನನಗೆ ತುಂಬ ಬೇಸರ ಆಗಿದ್ದು ಹಾಕಿದ ಬಂಡವಾಳದ ಬಗ್ಗೆ ಅಲ್ಲ. ಬದಲಿಗೆ ಸಿನಿಪ್ರೇಮಿಗಳು ಚಿತ್ರಮಂದಿರಗಳಿಗೆ ಆಗಮಿಸಿ, ನಮ್ಮ ಸಿನಿಮಾ ನೋಡುತ್ತಿಲ್ಲ ಎನ್ನುವುದಷ್ಟೇ. ಬಾಕ್ಸ್ ಆಫೀಸ್ನಲ್ಲಿ ಚಿತ್ರವು ಪಡೆಯಬೇಕಿದ್ದ ಗೆಲುವು ನೋಡುತ್ತಿಲ್ಲ ಮತ್ತು 350ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಕಂಡಿದ್ದ ಹನುಮಾನ್ ಅಂಶ್ ಅನ್ನು ದೊಡ್ಡ ಚಿತ್ರಗಳು ಬಂತೆಂದ ಕೂಡಲೇ 30ಕ್ಕೆ ಇಳಿಸಿದರು. ಆಗ ಮನಸ್ಸಿಗೆ ತುಂಬ ನೋವಾಯಿತು. ಅಷ್ಟಕ್ಕೂ ಏನಾಗುತ್ತಿದೆ ಎಂಬುದೇ ನಮಗೆ ಅರ್ಥವಾಗಲಿಲ್ಲ ಎಂದರು.
ನಮ್ಮ ಸಿನಿಮಾ ತೆರೆಗೆ ಬರುವ ಮುನ್ನ ಪ್ರಚಾರ ಕಾರ್ಯದಲ್ಲಿ ತೊಡಗಲು ಬಿಜಿಯಾದೆವು. ಕೂಡಲೇ ನಾನು ದೆಹಲಿಗೆ ಹೊರಟು, ಯಾರನ್ನೆಲ್ಲ ಭೇಟಿಯಾಗಿ ಸಹಾಯ ಪಡೆಯುಬಹುದೋ, ಅವರ ಜತೆಗೆ ಮಾತನಾಡಿ ಪ್ರಚಾರಕ್ಕೆ ಮುಂದಾದೆ. ದೊಡ್ಡ ದೊಡ್ಡ ನಾಯಕರು, ಭಗವಂತನ ಭಕ್ತಾಧಿಗಳು ಸೇರಿದಂತೆ ಹಲವರ ಜತೆ ಚಿತ್ರದ ಬಗ್ಗೆ ಅರ್ಥ ಮಾಡಿಸಿದೆ. ಯಾವಾಗ ನಮ್ಮ ತಂಡಕ್ಕೆ ಪ್ರಚಾರಕ್ಕೂ ಕೈಜೋಡಿಸಲು ಕಷ್ಟವಾಯಿತೋ, ಆಗ ಸ್ವತಃ ನಾನೇ ಖುದ್ದಾಗಿ ಇದನ್ನು ಕೈಗೆತ್ತಿಕೊಂಡೆ ಎಂದಿದ್ದಾರೆ.
"ಚಿತ್ರವು ಯಾವಾಗ ಫ್ಲಾಪ್ ಎಂದು ಕರೆಯಲು ಶುರುವಾಯಿತೋ, ಆಗ ನಾನು ನನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಊರಿಗೆ ಹೊರಡಲು ಪ್ಲ್ಯಾನ್ ಮಾಡಿದ್ದೆ. ಈ ಉದ್ಯಮವು ನಮಗಲ್ಲ ಎಂದು ನಿರ್ಧರಿಸಿದೆ. ಆದರೆ, ನಂತರದಲ್ಲಿ ಆಗಿದ್ದೆಲ್ಲವೂ ಒಂದು ರೀತಿ ಪವಾಡವೇ ಸರಿ ಎಂದರು. ಇನ್ನು, ಆರಂಭದಿಂದಲೂ, ನಾನು ಟೀಮ್ ಸೇರುವ ಮೊದಲೇ, ಹನುಮಾನ್ ಅಂಶ್ ತಂಡವು ಪೋಸ್ಟ್-ಪ್ರೊಡಕ್ಷನ್ ಹೂಡಿಕೆಗಾಗಿ ಅನೇಕರ ಬಳಿ ಹೋಗಿತ್ತು. ತುಂಬಾ ದೊಡ್ಡ ಬಜೆಟ್ ಅಲ್ಲದಿದ್ದರೂ ಯಾರೂ ಬಂಡವಾಳ ಹಾಕಲು ಒಪ್ಪಲಿಲ್ಲ" ಎಂದು ಹೇಳಿದ್ದಾರೆ.
ರಿಲೀಸ್ ಆದ ಮೊದಲ ದಿನವೇ ಕೇವಲ 10 ಲಕ್ಷ ರೂ. ಗಳಿಸುವ ಮೂಲಕ ತೀರ ಮಂದಗತಿಯಲ್ಲಿ ಸಾಗಿದ ಈ ಭಕ್ತಿಪ್ರಧಾನ ಚಿತ್ರವು, ಜಾಗತಿಕವಾಗಿ ಈಗ 316 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡಿದೆ. ಮೌತ್ ಮಾರ್ಕೆಟಿಂಗ್ ಅಂದರೆ ಮಾತಿನಿಂದ ಮಾತು ಹರಡಿದ ಬೆನ್ನಲ್ಲೇ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದು, ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪಾಸಿಟಿವ್ ವಿಮರ್ಶೆಗಳು ಮತ್ತು ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ಮತ್ತೊಂದೆಡೆ, ಥಿಯೇಟರ್ಗಳಿಗೆ ಜನರ ದಂಡು ಕೂಡ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ.
ಸಾಮಾನ್ಯವಾಗಿ, ಬಾಲಿವುಡ್‌ನ ಸಿನಿಮಾಗಳು ಎಂದರೆ ಅಲ್ಲಿ ನೂರಾರು ಕೋಟ್ಯಂತರ ರೂಪಾಯಿ ಬಂಡವಾಳವನ್ನೇ ಹೂಡಿಕೆ ಮಾಡಿರುತ್ತಾರೆ ಎಂಬುದು ಸಿನಿಪ್ರೇಕ್ಷಕರಿಗೆ ಗೊತ್ತಿರುವ ವಿಷಯ. ಆದರೆ, 'ಹನುಮಾನ್ ಅಂಶ' ಚಿತ್ರವನ್ನು ಕೇವಲ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನೂ ವಿಶೇಷ ಎಂದರೆ, ನಿರ್ದೇಶಕ ಮತ್ತು ನಿರ್ಮಾಪಕ ವಿಶಾಲ್ ಚತುರ್ವೇದಿ ಅವರು ತಮಗಾಗಿ ಯಾವುದೇ ಸಂಭಾವನೆ ಪಡೆಯದೆ ಸಿನಿಮಾವನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).