

ಬೆಂಗಳೂರು: ನಟ ಶರಣ್ ಮತ್ತು ನಿರ್ದೇಶಕ ತರುಣ್ ಒಟ್ಟಿಗೆ ನಿರ್ವಿುಸಿರುವ ಚಿತ್ರ ‘ಗುರು ಶಿಷ್ಯರು’. ‘ಇನ್ಸ್ಪೆಕ್ಟರ್ ವಿಕ್ರಮ್ ಬಳಿಕ ಜಡೇಶ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ‘ಆಣೆ ಮಾಡಿ ಹೇಳುತೀನಿ ...’ ಎಂಬ ಮೆಲೊಡಿ ಸಾಂಗ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಟ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹಾಡು ನೋಡಿದ ಬಳಿಕ ಮಾತನಾಡಿದ ಅವರು, ‘ತರುಣ್, ಶರಣ್ನ ಗೆಳೆತನ ನೂರು ಕಾಲ ಹೀಗೇ ಇರಬೇಕು ಅಂತ ಅನ್ನಿಸುತ್ತದೆ. ಇವರಿಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡೇ ಇರುತ್ತಾರೆ. ಇವರ ಮಧ್ಯೆ ತೆಗಳುವವರೊಬ್ಬರು ಬೇಕು, ಅದು ನಾನು ಮಾಡ್ತೀನಿ. ಮಾಸ್ ಯಾವತ್ತಿದ್ದರೂ ಕಾಲುಗಳು ತಾಳ ಹಾಕುವಂತೆ ಮಾಡುತ್ತವೆ. ಮೆಲೊಡಿ ಹೃದಯ ತಾಳ ಹಾಕುವಂತೆ ಮಾಡುತ್ತೆ. ಮಾಸ್ ಟೆಂಪರರಿ, ಮೆಲೊಡಿ ಪರ್ಮನೆಂಟ್. ನಾನು ಯಾವತ್ತೂ ಮಾಸ್ ಆಗಿ ಯೋಚನೆ ಮಾಡಲೇ ಇಲ್ಲ. ಕ್ಲಾಸ್ ಆಗಿ ಮಾಸ್ ತಲುಪಿದವನು ನಾನು’ ಎಂದು ‘ಗುರು ಶಿಷ್ಯರು’ ಚಿತ್ರತಂಡಕ್ಕೆ ಮೆಲೊಡಿ ಪಾಠ ಮಾಡಿದರು ‘ಹಳ್ಳಿಮೇಷ್ಟ್ರು’.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶರಣ್, ‘ತರುಣ್ ಸುಧೀರ್ ಈ ಚಿತ್ರದ ಪ್ರಥಮ ಗುರು. ನಿರ್ದೇಶಕ ಜಡೇಶ್ ಎರಡನೇ ಗುರು. ಅವರಿಗೆ ನಾನು ನನ್ನನ್ನು ಸಮರ್ಪಿಸಿಕೊಂಡು, ಅವರು ಹೇಳಿದಂತೆ ಕೇಳಿದ್ದೇನೆ’ ಎಂದರು. ನಿರ್ವಪಕ ತರುಣ್ ಸುಧೀರ್ ಮಾತನಾಡಿ, ‘ರವಿಚಂದ್ರನ್ ಅವರು ಗೋಲ್ಡನ್ ಹ್ಯಾಂಡ್. ಅವರು ನಮ್ಮ ಮೊದಲ ಚಿತ್ರ ‘ರ್ಯಾಂಬೋ’ ಹಾಡುಗಳ ಬಿಡುಗಡೆ ಮಾಡಿಕೊಟ್ಟಿದ್ದರು. ಹಾಡುಗಳು ಸೂಪರ್ಹಿಟ್ ಆಗಿದ್ದವು. ಅಲ್ಲಿಂದ ಇಲ್ಲಿವರೆಗೂ ನಮ್ಮ ಚಿತ್ರಗಳ ಒಂದಲ್ಲಾ ಒಂದು ಹಾಡು ಹಿಟ್ ಆಗಿವೆ’ ಎಂದು ಧನ್ಯವಾದ ತಿಳಿಸಿದರು. ಇನ್ನು ನಾಯಕಿ ನಿಶ್ವಿಕಾ ಚಿತ್ರದಲ್ಲಿನ ತಮ್ಮ ಪಾತ್ರದಂತೆಯೇ ಹಳ್ಳಿ ಹುಡುಗಿಯಾಗಿ ಲಂಗ ದಾವಣಿಯಲ್ಲಿ ವೇದಿಕೆ ಮೇಲೆ ಮಿಂಚಿದರು.
ಶರಣ್ ಮೀಸೆ ಸ್ಟೋರಿ...!: ಈ ಚಿತ್ರಕ್ಕಾಗಿ ಮೀಸೆ ಬಿಟ್ಟಿದ್ದರ ಬಗ್ಗೆ ಮಾತನಾಡಿದ ಶರಣ್, ‘25 ವರ್ಷಗಳ ಹಿಂದೆ ನಾನೂ ಮೀಸೆ ಬಿಟ್ಟಿದ್ದೆ. ನಮ್ಮಪ್ಪ ಒಂದು ಸಿನಿಮಾ ಮಾಡಿಸಿದರು. ಅದು ದೊಡ್ಡ ಹಿಟ್ ಆಯಿತು. ಆಗ ಹೊರಗಡೆ ಎಲ್ಲೂ ಓಡಾಡುವಂತಿರಲಿಲ್ಲ. ಬೇರೆ ಅವಕಾಶಗಳೂ ಸಿಗಲಿಲ್ಲ. ಹೊರಗೆ ಹೋದರೆ ಜನ ಕಂಡುಹಿಡಿದು ಬಿಡುತ್ತಿದ್ದರು. ನನಗೂ ಆಗ ನಟನೆ ಬೇಕಿರಲಿಲ್ಲ. ಹೀಗಾಗಿ ಆಗ ಮೀಸೆ ತೆಗೆದೆ’ ಎಂದರು.