ಕಾಶಿಯಾತ್ರೆಗೆ ತೆರಳಿದ್ದ ಕನ್ನಡಿಗರು ಅತಂತ್ರ; ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಯಾತ್ರಾರ್ಥಿಗಳು..

Train 1
ಉತ್ತರ ಪ್ರದೇಶದ ದೀನ್ ದಯಾಳ್ ಉಪಾಧ್ಯಾಯ ರೈಲು ನಿಲ್ದಾಣದಲ್ಲಿ ಕರ್ನಾಟಕಕ್ಕೆ ತೆರಳಲು ರೈಲಿಲ್ಲದೆ ಚಿಂತೆಯಲ್ಲಿರುವ ಕನ್ನಡಿಗರು.
Published on

ಬೆಂಗಳೂರು: ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉದ್ರಿಕ್ತ ಗುಂಪು ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿರುವುದರಿಂದ ಉತ್ತಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ರೈಲು ಸಂಚಾರ ರದ್ದಾಗಿದೆ. ಪರಿಣಾಮವಾಗಿ ಕಾಶಿ ಯಾತ್ರೆಗೆ ತೆರಳಿದ್ದ ಸಾವಿರಾರು ಕನ್ನಡಿಗರು ಅಂತ್ರಕ್ಕೆ ಸಿಲುಕಿದ್ದಾರೆ. ಇಂದು ರಾತ್ರಿ ವಾರಾಣಸಿ-ಮಧ್ಯಪ್ರದೇಶ, ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಹಿಂದಿರುಗಬೇಕಿದ್ದ ಯಾತ್ರಿಗಳಿಗೆ ರೈಲು ರದ್ದಾಗಿರುವ ವಿಚಾರ ಕೇಳಿ ದಿಕ್ಕುತೋಚದಂತಾಗಿದೆ.

ದಯವಿಟ್ಟು ಕನ್ನಡಿಗರನ್ನು ಕ್ಷೇಮವಾಗಿ ವಾಪಸ್ ಕರೆತರಲು ವ್ಯವಸ್ಥೆ ಮಾಡಿ, ಇಲ್ಲವೇ ರೈಲು ಸಂಚಾರ ಆರಂಭ ಆಗುವವರೆಗೂ ವಾಸ್ತವ್ಯ, ಕುಡಿವ ನೀರು, ಊಟದ ವ್ಯವಸ್ಥೆ ಮಾಡಿ ಎಂದು ಕನ್ನಡಿಗರು ಅಳಲು ತೋಡಿಕೊಂಡಿದ್ದಾರೆ. ಕಾಶಿ ಯಾತ್ರೆಗೆ ತೆರಳಿದವರಲ್ಲಿ ವೃದ್ಧರು, ಮಧುಮೇಹ ರೋಗಿಗಳೇ ಹೆಚ್ಚಿದ್ದು ಆತಂಕದಲ್ಲಿದ್ದಾರೆ.

ಕಾಶಿಯಾತ್ರೆ ಮುಗಿಸಿ ಕರ್ನಾಟಕಕ್ಕೆ ಹಿಂದಿರುಗಬೇಕು ಎನ್ನುವಷ್ಟರಲ್ಲಿ ರೈಲು ರದ್ದಾಗಿದ್ದು, ಮುಂದೇನು ಎಂಬ ಆತಂಕದಲ್ಲಿರುವ ಕನ್ನಡಿಗರು ರಾಜ್ಯ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಜೂ.9ರಂದು ಬೆಂಗಳೂರಿಂದ ಕಾಶಿಗೆ ತೆರಳಿದ್ದ ಕುಣಿಗಲ್ ಮೂಲದ ಐ.ಟಿ. ಮೂರ್ತಿ ಮತ್ತು ರಾಮನಗರದ ದೇವರಾಜು ಕುಟುಂಬದ 12 ಮಂದಿ ಸೇರಿದಂತೆ ರಾಜ್ಯದ 70ಕ್ಕೂ ಅಧಿಕ ಮಂದಿ ಅಲ್ಲೇ ಸಿಲುಕಿದ್ದಾರೆ. ಅತ್ತ ಯಾತ್ರಾರ್ಥಿಗಳು ಸಮಸ್ಯೆಯಲ್ಲಿ ಸಿಲುಕಿರುವುದರಿಂದ ಇತ್ತ ಕರ್ನಾಟಕದಲ್ಲಿ ಅವರ ಸಂಬಂಧಿಕರು ಕೂಡ ಆತಂಕದಿಂದ ಅವರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net