

ಬೆಂಗಳೂರು: 2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರ ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು. ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದವರು ಲೋಕೇಂದ್ರ ಸೂರ್ಯ. ಇದೀಗ ಅಟ್ಟಯ್ಯ ನಂತರ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಆರಂಭಿಸುತ್ತಿದ್ದಾರೆ. ಈ ಚಿತ್ರಕ್ಕೆ ʻಹಾಫ್ʼ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರೀಕರಣದ ಪೂರ್ವಭಾವಿಯಾಗಿ ಅದ್ಧೂರಿ ಫೋಟೋ ಶೂಟ್ ಕೂಡಾ ಮಾಡಿದ್ದಾರೆ.
ಇದನ್ನೂ ಓದಿ: ‘ಆರ್.ಎಕ್ಸ್ 100’ ಗೊತ್ತು, ಈ ‘ಆರ್.ಎಚ್ 100’ ಏನು?
ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಆರ್. ಪವಿತ್ರ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.
ಮಲ್ಲಿಕಾರ್ಜುನ್ ಬಿ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಆರ್. ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರ ತಾರಾಗಣವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನೆರವೇರಲಿದೆ.
ಇದನ್ನೂ ಓದಿ: ಕಿಯಾರಾಗೆ ಮಿಸ್ ಆದ ಅವಕಾಶ ಆಲಿಯಾಗೆ ಸಿಕ್ತು!
ಈ ವರೆಗೆ ಭಾರತೀಯ ಚಿತ್ರರಂಗದಲ್ಲೇ ಯಾರೂ ಮುಟ್ಟಿರದ ಕಥಾವಸ್ತು ನಮ್ಮ ʻಹಾಫ್ʼ ಚಿತ್ರದ್ದು. ಶೀರ್ಷಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮೂವರು ನಾಯಕಿಯರೊಂದಿಗೆ ಫೋಟೋಶೂಟ್ ನೆರವೇರಿದೆ. ನನ್ನ ಮೊದಲ ಸಿನಿಮಾದ ಲಿಮಿಟೆಡ್ ಬಜೆಟ್ ಹೊಂದಿತ್ತು. ಈ ಬಾರಿ ದೊಡ್ಡ ಬಜೆಟ್ಟಿನಲ್ಲಿ, ಪಕ್ಕಾ ಕಮರ್ಷಿಯಲ್ ಫಾರ್ಮುಲಾಗಳನ್ನು ಅಳವಡಿಸಿಕೊಂಡು ಸಿನಿಮಾ ರೂಪಿಸುತ್ತಿದ್ದೇನೆʼ ಎನ್ನುವುದು ನಿರ್ದೇಶಕ ಮತ್ತು ನಟ ಲೋಕೇಂದ್ರ ಸೂರ್ಯ ಅವರ ಮಾತು.