

ಬೆಂಗಳೂರು: ‘ಬದನೆಕಾಯಿ, ಈರುಳ್ಳಿ ಟೊಮೆಟೊನ ಫ್ರಿಡ್ಜ್ನಲ್ಲಿಟ್ಟು ಕಾಸು ಕೊಡಲ್ಲ ಸ್ವಾಮಿ. ಆದರೆ, ನನ್ನ ಎಂಟು ದಿನಗಳ ಕಾಲ ಫ್ರಿಡ್ಜ್ನಲ್ಲಿಟ್ಟು, ಕೈತುಂಬ ಕಾಸು ಕೊಟ್ಟರು...’ ಎಂದು ಹೇಳಿ ನಕ್ಕರು ಗುರುಪ್ರಸಾದ್. ಅವರು ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ. ಹೆಸರು ‘ಬಾಡಿ ಗಾಡ್’. ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ಬರೆದು ನಿರ್ದೇಶಿಸಿದ್ದು, ಗುರುಪ್ರಸಾದ್ ಜತೆಗೆ ಮನೋಜ್, ಪದ್ಮಜಾ ರಾವ್ ಮುಂತಾದವರು ನಟಿಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ಗುರುಪ್ರಸಾದ್, ‘ಈ ಚಿತ್ರದಲ್ಲಿ ನಾನು ಡೆಡ್ ಬಾಡಿಯಾಗಿರುತ್ತೇನೆ. ಹಾಗಾಗಿ, ‘ಬಾಡಿ ಗಾಡ್’ ಎಂಬ ಹೆಸರನ್ನು ಇಡಲಾಗಿದೆ. ಆ ಪಾತ್ರ ಯಾಕೆ ಡೆಡ್ ಬಾಡಿಯಾಗುತ್ತದೆ? ಆಮೇಲೇನಾಗುತ್ತದೆ? ಎಂಬುದೇ ಚಿತ್ರದ ಕಥೆ. ಬೇರೆ ಭಾಷೆಗಳಲ್ಲಿ ಡೆಡ್ ಬಾಡಿ ನಡೆದಾಡುವ ದೃಶ್ಯಗಳು ಚಿಕ್ಕದಾಗಿ ಬಂದು ಹೋಗಿದೆ. ಆದರೆ, ಇಡೀ ಚಿತ್ರದಲ್ಲಿ ಡೆಡ್ ಬಾಡಿಯನ್ನು ಪ್ರಧಾನವಾಗಿಟ್ಟುಕೊಂಡು ಕಥೆ ಹೇಳುವ ಪ್ರಯತ್ನ ಆಗಿರಲಿಲ್ಲ. ಆ ನಿಟ್ಟಿನಲ್ಲಿ ಇದೊಂದು ವಿಶೇಷವಾದ ಪ್ರಯತ್ನ’ ಎಂದು ಗುರುಪ್ರಸಾದ್ ಹೇಳಿಕೊಂಡಿದ್ದಾರೆ.