

ಬೆಂಗಳೂರು: ಶರಣ್ ಅಭಿನಯದ 'ಗುರು ಶಿಷ್ಯರು' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆಯೇ ಸಿಕ್ಕಿತ್ತು. ವಿಮರ್ಶಕರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಬಾಕ್ಸ್-ಆಫೀಸ್ನಲ್ಲಿ ಮಾತ್ರ ಚಿತ್ರ ಅಷ್ಟೇನೂ ಕರಾಮತ್ತು ಮಾಡಲಿಲ್ಲ. ಚಿತ್ರವು ಒಳ್ಳೆಯ ಓಪನಿಂಗ್ ಪಡೆದರೂ, ನಂತರದ ದಿನಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಎರಡ್ಮೂರು ವಾರಗಳ ನಂತರ ಚಿತ್ರಮಂದಿರಗಳಿಂದ ಹೊರಟ 'ಗುರು ಶಿಷ್ಯರು' ಇದೀಗ ಜೀ 5ನಲ್ಲಿ ದರ್ಶನ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಹೌದು, 'ಗುರು ಶಿಷ್ಯರು' ಚಿತ್ರವು ಜೀ 5ನಲ್ಲಿ ಇದೇ ನ.11ರಂದು ಸ್ಟ್ರೀಮ್ ಆಗಲಿಕ್ಕೆ ಸಿದ್ಧವಾಗಿದ್ದು, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪ್ರಾರಂಭವಾಗಿದೆ. ಇದೊಂದು ಖೋಖೋ ಕುರಿತ ಚಿತ್ರವಾಗಿದ್ದು, ದೇಸಿ ಕ್ರೀಡೆಯ ಮಹತ್ವವನ್ನು ಸಾರುತ್ತದೆ.
'ಗುರು ಶಿಷ್ಯರು' ಚಿತ್ರದ ವಿಶೇಷತೆಯೆಂದರೆ, ಇದರಲ್ಲಿ ಹಲವು ನಟರ ಮಕ್ಕಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಶರಣ್ ಮಗ ಹೃದಯ್, 'ನೆನಪಿರಲಿ' ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ ಮಗ ಹರ್ಷಿತ್, ಬುಲೆಟ್ ಪ್ರಕಾಶ್ ಮಗ ರಕ್ಷತ್ ಅಲ್ಲದೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಗುರು ಶಿಷ್ಯರು' ಚಿತ್ರದಲ್ಲಿ ಶರಣ್, ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅಪೂರ್ವ ಕಾಸರವಳ್ಳಿ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರವನ್ನು ಜಡೇಶ್ ಹಂಪಿ ನಿರ್ದೇಶನ ಮಾಡಿದ್ದಾರೆ.