ರೆಸ್ಪಾನ್ಸ್​ ಚೆನ್ನಾಗಿದೆಯಂತೆ ... ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಅಷ್ಟೇ!

Groofy - Final
Published on

ಬೆಂಗಳೂರು: ಸೆಲ್ಫೀ ಫೋಟೋ ತೆಗೆಯುವ ಹವ್ಯಾಸ ಅತಿಯಾದಾಗ ಅದು ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತದೆ ಎಂಬ ಸಂದೇಶದೊಂದಿಗೆ ಬಿಡುಗಡೆಯಾದ 'ಗ್ರೂಫಿ' ಆಗಸ್ಟ್​ 20ರಂದು ಬಿಡುಗಡೆಯಾಗಿತ್ತು. ಡಿ.ರವಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಅಷ್ಟೇ ಅಲ್ಲ, ಚಿತ್ರ ಇದೀಗ 25 ದಿನಗಳನ್ನೂ ಪೂರೈಸಿದೆಯಂತೆ. ಈ ಸಂಭ್ರಮವನ್ನು ಇತ್ತೀಚೆಗೆ ಚಿತ್ರತಂಡದವರು ಹಂಚಿಕೊಂಡಿದ್ದಾರೆ.

'ಗ್ರೂಫಿ' 25 ದಿನಗಳನ್ನು ಪೂರೈಸಿರುವ ಖುಷಿಯಲ್ಲಿರುವ ನಿರ್ದೇಶಕರು, 'ನಮ್ಮ ಸಿನಿಮಾಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ಚಿತ್ರ ವೀಕ್ಷಿಸಿದ ಎಲ್ಲರೂ ಚೆನ್ನಾಗಿದೆ ಅಂತಲೇ ಹೇಳುತ್ತದ್ದಾರೆ. ಆದರೂ ಜನ ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ. ತಂತ್ರಜ್ಞರು, ಸ್ನೇಹಿತರು ಒಳ್ಳೇ ಪ್ರಯತ್ನ ಮಾಡಿದ್ದೀರಿ ಅಂತ ಕಾಲ್‌ ಮಾಡಿ ಹೇಳುತ್ತಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ನಮಗೂ ಖುಷಿಯಾಗಿದೆ. ನಮ್ಮ ಚಿತ್ರ ಬೆಂಗಳೂರು ಸೇರಿದಂತೆ ಬೇರೆಬೇರೆ ಜಿಲ್ಲೆಗಳ ಮಲ್ಟಿಪ್ಲೆಕ್ಸ್ ನಲ್ಲಿ ರಿಲೀಸಾಗಿತ್ತು, ಸದ್ಯ ಒರಾಯನ್ ಮಾಲ್‌ನಲ್ಲಿ ಎರಡು ಷೋ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿಂಗಲ್ ಸ್ಕ್ರೀನ್​ಗಳಲ್ಲೂ ರಿಲೀಸ್ ಮಾಡುವ ಯೋಜನೆಯಿದೆ' ಎಂದು ಹೇಳಿದರು.

ಬೇರೆಬೇರೆ ಜಿಲ್ಲೆಗಳಿಂದ ನಿರ್ಮಾಪಕರು ನಿರ್ಮಾಪಕ ಕೆಜಿ ಸ್ವಾಮಿ ಅವರಿಗೆ ಫೋನ್​ ಮಾಡಿ, ಪ್ರದರ್ಶನಕ್ಕೆ ಚಿತ್ರ ಕೊಡಿ ಎಂದು ಕೇಳುತ್ತಿದ್ದಾರಂತೆ. 'ನಾವು ಚಿತ್ರವನ್ನು ರಿಲೀಸ್ ಮಾಡಿದಾಗ ಎಂಟು ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ ಇತ್ತು. ಹಾಗಾಗಿ ಹೆಚ್ಚಿನ ಸೆಂಟರ್‌ಗಳಲ್ಲಿ ರಿಲೀಸ್ ಮಾಡಲು ಆಗಿರಲಿಲ್ಲ. ಈಗ ಎಲ್ಲರೂ ಕಾಲ್‌ ಮಾಡಿ ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. ನಾವೇನೋ ಕೊಡುವುದಕ್ಕೆ ರೆಡಿ. ಜನ ಧೈರ್ಯದಿಂದ ಥಿಯೇಟರ್‌ಗೆ ಬರಬೇಕಿದೆ' ಎಂದು ಹೇಳಿದರು.

ಆರ್ಯನ್, ಪದ್ಮಶ್ರೀ ಸಿ ಜೈನ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ, ವಿಜೇತ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net