

ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮನುಷ್ಯ ನೇರವಾಗಿ ಪರಿಸರ ನಾಶಕ್ಕೆ ಕಾರಣನಾಗುತ್ತಿದ್ದಾನೆ. ಅದರಲ್ಲಿ ಇ- ತ್ಯಾಜ್ಯದ ಪ್ರಮಾಣ ಹೆಚ್ಚಿದೆ. ಅಂಥಹ ವಸ್ತುಗಳನ್ನು ಬಳಕೆ ಮಾಡುವುದನ್ನು ಮೊದಲು ಕಡಿಮೆ ಮಾಡಬೇಕು. ಮಾರುಕಟ್ಟೆಗೆ ಹೊಸದೇನಾದರೂ ಬಂದರೆ ಅದನ್ನು ಮೊದಲು ಖರೀದಿಸಲು ಹೋಗುತ್ತೇವೆ. ಹಳೇ ವಸ್ತುಗಳನ್ನು ನಿಗದಿತ ದಿನಕ್ಕಿಂತ ಮೊದಲೇ ಬಿಸಾಕುತ್ತೇವೆ. ಅಗತ್ಯ ಬಿದ್ದರೆ ಮಾತ್ರ ಖರೀದಿಸ ಬೇಕು. ನಮ್ಮ ಖರೀದಿ ಪರಿಸರ ಸ್ನೇಹಿಯಾಗಿದ್ದರೆ ತುಂಬ ಒಳ್ಳೆಯದು. ಪರಿಸರಕ್ಕೆ ಹಾನಿಮಾಡುವಂತ ವಸ್ತುಗಳನ್ನು ಬಳಕೆ ಮಾಡುವುದೇ ಬೇಡ ಎಂಬುದಕ್ಕಿಂತ ಬಳಕೆಯ ಪ್ರಮಾಣ ಕಡಿಮೆ ಮಾಡೋಣ. ಸಮಯ ಸಿಕ್ಕಾಗಲೆಲ್ಲ ಸಸಿ ನೆಡೋಣ. ಪರಿಸರಕ್ಕೆ ನಾವು ಮಾಡಬೇಕಿರುವ ಕಿರು ಸೇವೆ ಇದು. | ಹರಿಪ್ರಿಯಾ
ಪ್ರಕೃತಿ, ಪರಿಸರದ ಮುಂದೆ ನಾವೆಲ್ಲ ತುಂಬ ಚಿಕ್ಕವರು. ನಮ್ಮ ಸುತ್ತಲಿನ ಪರಿಸರವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ, ಅದೂ ನಮ್ಮನ್ನು ಅಷ್ಟೇ ಚೆನ್ನಾಗಿ ನೋಡುಕೊಳ್ಳುತ್ತದೆ. ಮನುಷ್ಯನಿಗೆ ಈ ಭೂಮಿ ಮೇಲೆ ಹೇಗೆ ಬದುಕುವ ಹಕ್ಕಿದೆಯೋ, ಅದೇ ರೀತಿ ಸಕಲ ಜೀವರಾಶಿಗೂ ಬದುಕುವ ಹಕ್ಕಿದೆ. ಸಾಧ್ಯವಾದಷ್ಟು ಅವುಗಳ ರಕ್ಷಣೆಯತ್ತ ಗಮನ ಹರಿಸಬೇಕಿದೆ. ಗಿಡ ನೆಟ್ಟಷ್ಟು ಅನುಕೂಲವೇ ಹೊರತು, ಅನಾನುಕೂಲವಲ್ಲ. ಸಾಧ್ಯವಾದಷ್ಟು ಸಸಿ ಬೆಳೆಸೋಣ. ಈಗಿನ ಮಕ್ಕಳಿಗೆ ಪರಿಸರ ಮತ್ತು ಪ್ರಕೃತಿಯ ಬಗೆಗಿನ ಮಾಹಿತಿ ರವಾನಿಸಬೇಕಿದೆ. ಪ್ಲಾಸ್ಟಿಕ್ ಬಳಕೆ, ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆ ಕಡಿಮೆ ಮಾಡೋಣ. ನಮ್ಮ ಸಣ್ಣ ಸಣ್ಣ ಕೆಲಸಗಳೇ ಪರಿಸರ ಉಳಿವಿಗೆ ದಾರಿಯಾಗಲಿದೆ. | ಸಂಯುಕ್ತಾ ಹೊರನಾಡು
ವಿಶ್ವ ಪರಿಸರ ದಿನಾಚರಣೆ ಅಂದ ತಕ್ಷಣ ಬರೀ ಗಿಡಮರಗಳನ್ನಷ್ಟೆ ನೆಡುವುದಲ್ಲ. ನಮ್ಮ ನಿತ್ಯ ಜೀವನದಲ್ಲೂ ಹಲವು ರೀತಿಯಲ್ಲಿ ಪರಿಸರಕ್ಕೆ ಅಳಿಲು ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ಸಿಗುತ್ತದೆ. ಪ್ಲಾಸ್ಟಿಕ್ ನೀರಿನ ಬಾಟಲ್ ಖರೀದಿಸುವ ಬದಲು, ಜತೆಯಲ್ಲಿಯೆ ಒಂದು ಸ್ಟೀಲ್ ಬಾಟಲ್ ಇಟ್ಟುಕೊಳ್ಳಿ. ಓಡಾಟಕ್ಕೆ ದ್ವಿಚಕ್ರ ವಾಹನ ಬಳಸುವ ಬದಲು ಸಾರ್ವಜನಿಕ ಸಾರಿಗೆ ಉಪಯೊಗಿಸುವುದು ತುಂಬ ಒಳ್ಳೆಯದು. ನಾನೇ ಎಷ್ಟೊ ಸಲ ನಮ್ಮ ಮನೆ ಬಳಿಯ ಮೆಟ್ರೊದಿಂದ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡು ಮಾಲ್ಗೆ ಹೋಗಿದ್ದೇನೆ. ವಾರಾಂತ್ಯದಲ್ಲಿ ವಾಹನ ಬದಿಗಿಟ್ಟು, ಸೈಕಲ್ ಸವಾರಿ ಹೋಗುವುದನ್ನು ರೂಢಿಸಿಕೊಂಡರೆ ದೇಹಕ್ಕೂ ಒಳ್ಳೆಯದು, ಜೇಬಿಗೂ ಉಳಿತಾಯ. ಇದೆಲ್ಲ ಒಂದೆಡೆಯಾದರೆ ಐಟಿ-ಬಿಟಿ ಕಂಪನಿಗಳು ಮುಂದಾಳತ್ವ ವಹಿಸಿಕೊಂಡು, ವಾರದ ಎರಡು ದಿನ ಕೆರೆ ಹೂಳೆತ್ತುವುದು, ಕೆರೆ ಅಭಿವೃದ್ಧಿ ಕೆಲಸಗಳಲ್ಲಿ ಭಾಗವಹಿಸುವುದರಿಂದಲೂ ಪರಿಸರಕ್ಕೆ ಸೇವೆ ಸಲ್ಲಿದಂತಾಗುತ್ತದೆ. ಹೀಗೆ ಇನ್ನೂ ಸಾಕಷ್ಟು ಅವಕಾಶಗಳು ನಮ್ಮ ಕಣ್ಣ ಮುಂದಿವೆ. ಅವೆಲ್ಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದೆ ಆದಲ್ಲಿ, ನಮ್ಮ ಕೈಯಿಂದ ಪರಿಸರಕ್ಕೆ ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ.| ಸೋನು ಗೌಡ