'ಗ್ರಾಮಾಯಣ' ಬಿಡುಗಡೆಗೂ ಮುನ್ನವೇ ನಿರ್ಮಾಪಕ ಮೂರ್ತಿ ನಿಧನ

S L N Murthy - Final
Published on

ವಿನಯ್​ ರಾಜಕುಮಾರ್​ ಅಭಿನಯದ 'ಗ್ರಾಮಾಯಣ' ಚಿತ್ರದ ನಿರ್ಮಾಪಕ ಎಸ್​.ಎಲ್​.ಎನ್​. ಮೂರ್ತಿ ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ.

ಮೂರ್ತಿ ಅವರು ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಗುರುವಾರವಷ್ಟೇ ಅವರ ತಾಯಿ ನಿಧನರಾಗಿದ್ದರು. ಅದರ ಮರುದಿನವೇ ಮೂರ್ತಿ ಸಹ ನಿಧನರಾಗಿದ್ದು, ಅವರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ.

ಮೂಲತಃ ರಂಗಭೂಮಿಯವರಾದ ಮೂರ್ತಿ, ಒಂದಿಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಎರಡು ವರ್ಷಗಳ ಹಿಂದೆ ವಿನಯ್​ ರಾಜಕುಮಾರ್​ ಅಭಿನಯದಲ್ಲಿ 'ಗ್ರಾಮಾಯಣ' ಚಿತ್ರವನ್ನು ಪ್ರಾರಂಭಿಸಿದ್ದರು. ಈ ಚಿತ್ರದ ಟೀಸರ್​ ಬಿಡುಗಡೆ ಸಮಾರಂಭವು ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್​ ಮತ್ತು ಪುನೀತ್​ ರಾಜಕುಮಾರ್​ ಅವರು ಜಂಟಿಯಾಗಿ ಟೀಸರ್​ ಬಿಡುಗಡೆ ಮಾಡಿದ್ದರು.

ಟೀಸರ್​ ಬಿಡುಗಡೆ ಮಾಡಿ, ಚಿತ್ರೀಕರಣವು ಪ್ರಾರಂಭವಾಗಿದ್ದರೂ ಅಂದುಕೊಂಡಂತೆ ಚಿತ್ರೀಕರಣ ಮುಕ್ತಾಯವಾಗಿರಲಿಲ್ಲ. ಇತ್ತೀಚಿಗೆ ವಿನಯ್​ ರಾಜಕುಮಾರ್​ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನೊಂದು ಟೀಸರ್​ ಬಿಡುಗಡೆಯಾಗಿತ್ತು. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಿ, ಆದಷ್ಟು ಬೇಗ ಮುಗಿಸಿ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮೂರ್ತಿ ಮುಂದಾಗಿದ್ದರು.

ಆದರೆ, ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಅವರು ಇನ್ನಿಲ್ಲವಾಗಿದ್ದಾರೆ. ಈ ಚಿತ್ರವನ್ನು ಯಾರು ಮುಂದುವರೆಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net