

ಬೆಂಗಳೂರು: ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಹುತೇಕ ಮುಕ್ತಾಯ ಹಂತ ತಲುಪಿತ್ತು. ಅಷ್ಟೇ ಅಲ್ಲ, ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದ್ದವು. ಈಗ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಇದನ್ನೂ ಓದಿ: ಶಿವಪುರ ಗ್ರಾಮದ ಶಾಪದ ಕಥೆ ಚಿತ್ರವಾಗುತ್ತಿದೆ …
'ಗೌಳಿ' ಚಿತ್ರದ ಒಂದು ಹಾಡನ್ನು ಹೊರತುಪಡಿಸಿದರೆ, ಮಿಕ್ಕಂತೆ ಬಹುತೇಕ ಮುಕ್ತಾಯವಾಗಿತ್ತು. ಈಗ ಆ ಹಾಡಿನ ಚಿತ್ರೀಕರಣವೂ ಸಂಪೂರ್ಣವಾಗಿದೆ. ಕನಕಪುರ ಹತ್ತಿರದ ಸಂಗಮ ಫಾಲ್ಸ್ ಹಾಗೂ ನದಿಯ ಬ್ಯಾಕ್ ವಾಟರ್‌ನಲ್ಲಿ ಇತ್ತೀಚೆಗೆ ಪ್ರೇಮಗೀತೆಯ ಚಿತ್ರೀಕರಣ ನಡೆಸಿ ಕುಂಬಳಕಾಯಿ ಒಡೆಯಲಾಗಿದೆ. ಹಳ್ಳಿಯ ಪರಿಸರದ ಬ್ಯಾಕ್‌ಡ್ರಾಪ್‌ನಲ್ಲಿ, ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಶ್ರೀನಗರ ಕಿಟ್ಟಿ, ಪಾವನಾಗೌಡ ಹಾಗೂ ೪೦ರಿಂದ ೫೦ ನೃತ್ಯ ಕಲಾವಿದರು ಭಾವಹಿಸಿದ್ದರು.
ಈ ಹಾಡನ್ನು ಡಿಐ ಮಾಡಿ ಸೇರಿಸಿದರೆ ಸಿನಿಮಾ ಬಿಡುಗಡೆಗೆ ರೆಡಿಯಾದಂತೆ. ಸದ್ಯದಲ್ಲೇ 'ಗೌಳಿ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಸಲಾಗುವುದು ಮತ್ತು ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸಹ ಪ್ರಕಟಿಸಲಾಗುವುದು.
'ಗೌಳಿ' ಚಿತ್ರಕ್ಕಾಗಿ ಶಿರಸಿ, ಯಲ್ಲಾಪುರ, ಹುಬ್ಬಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು ೬೦ರಿಂದ ೬೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಶ್ರೀನಗರ ಕಿಟ್ಟಿ, ಪಾವನಾ ಗೌಡ, ರಂಗಾಯಣ ರಘು, ಯಶ್‌ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಮುಂತಾದವರು ನಟಿಸಿರುವ ಈ ಚಿತ್ರವನ್ನು ರಘು ಸಿಂಗಂ, ಸೋಹನ್ ಫಿಲಂ ಫ್ಯಾಕ್ಟರಿ ಸಂಸ್ಥೆಯಡಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಸೂರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ.