

ಬೆಂಗಳೂರು: ಕನ್ನಡದಲ್ಲಿ ಹಾರರ್, ಥ್ರಿಲ್ಲರ್ ಶೈಲಿಯ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ’1900’ ಎಂಬ ಇನ್ನೊಂದು ಹೊಸ ಚಿತ್ರ ಪ್ರಾರಂಭವಾಗಿದ್ದು, ಈ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಈ ಹಿಂದೆ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾ.ಪೂಜಾ ರಮೇಶ್, ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ದೃಶ್ಯಕ್ಕೆ ಲವ್ ಮಾಕ್ಟೆಲ್ ಖ್ಯಾತಿಯ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್.ಬಿ ಮತ್ತು ಉಮೇಶ್.ಕೆ.ಎನ್ ನಿರ್ಮಿಸುತ್ತಿದ್ದಾರೆ.
ಈ ಚಿತ್ರವು ಎರಡು ಕಾಲಘಟ್ಟದಲ್ಲಿ ನಡೆಯಲಿದ್ದು, 1900ರಲ್ಲಿ ಪ್ರಾರಂಭವಾಗಿ ಈಗ ಮುಕ್ತಾಯವಾಗುತ್ತದೆ. ಶಿವಪುರ ಎಂಬ ಗ್ರಾಮದಲ್ಲಿ ಅತೀಂದ್ರೆಯ ವಿದ್ಯೆಗಳನ್ನು ಕಲಿತಿರುವ ಹುಂಬನೊಬ್ಬ ನರಬಲಿ ಕೊಡುತ್ತಿರುತ್ತಾನೆ. ಇದನ್ನು ತಿಳಿದ ಜನರು ಅವನನ್ನು ಜೀವಂತ ಸುಡುತ್ತಾರೆ. ಆ ಸಂದರ್ಭದಲ್ಲಿ ಇವನು ಶಾಪ ಕೊಡುತ್ತಾನೆ. ಅದೇ ಶಾಪವು ಪ್ರಸಕ್ತ ಕಾಲಕ್ಕೂ ಮುಂದುವರೆದಿರುತ್ತದೆ. ಇದನ್ನು ತನಿಖೆ ಮಾಡಲು ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯ ಅಧಿಕಾರಿ ನೇಮಕಗೊಳ್ಳುತ್ತಾರೆ. ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆಯುವ ಘಟನೆಗಳು ಈ ಚಿತ್ರದ ಕಥೆಯಂತೆ.
ಮೂಡಿಬಿದರೆಯ ರಾಜೇಶ್.ಬಿ ಮೂಲತ: ನಟನಾಗಿ ಗುರುತಿಸಿಕೊಂಡಿದ್ದು, ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮೂಡಿಗೆರೆ, ಕನಕಪುರ ಕಡೆಗಳಲ್ಲಿ ಅಕ್ಟೋಬರ್ ಕೊನೆವಾರದಿಂದ ಚಿತ್ರೀಕರಣ ನಡೆಯಲಿದೆ.
'1900' ಚಿತ್ರದಲ್ಲಿ ವಿ.ಮನೋಹರ್, ಮಿಮಿಕ್ರಿ ಗೋಪಿ, 'ಮಜಾಭಾರತ' ಚಂದ್ರಪ್ರಭಾ, ಗುರುದೇವ್, ಮದನ್‌ರಾಜ್, ಮೀರಶ್ರೀ, ಚೈತನ್ಯಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ.